ಲೋಕದರ್ಶನ ವರದಿ
ಬೈಲಹೊಂಗಲ 20: ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮಿಜಿ ಅವರ ಉತ್ತರಾಧಿಕಾರಿ ಸದಾಶಿವಾನಂದ ಸ್ವಾಮಿಜಿ (44) ಅನಾರೋಗ್ಯದಿಂದ ಮಂಗಳವಾರ ಲಿಂಗೈಕ್ಯರಾದರು. ಕಳೆದ ಹಲವು ದಿನಗಳಿಂದ ಕಿಡ್ನಿ ಸ್ಟೋನ್ನಿಂದ ಬಳಲುತ್ತಿದ್ದರು.ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ರ್ತಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಪಾರ್ಥಿವ ಶರೀರ ದರ್ಶನ, ಮೆರವಣಿಗೆ: ಸ್ವಾಮಿಜಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಬುಧವಾರ ಶ್ರೀಮಠ ಆವರಣದಲ್ಲಿ ಭಕ್ತರ ದಂಡು ಹರಿದು ಬಂದಿತು. ಶ್ರೀಮಠದಲ್ಲಿ ಸ್ವಾಮಿಜಿ ಅವರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸಾಲು,ಸಾಲಾಗಿ ಬಂದು ದರ್ಶನ ಪಡೆದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಭವ್ಯ ಮೆರವಣಿಗೆ ಮೂಲಕ ಮರಳಿ ಶ್ರೀಮಠಕ್ಕೆ ಆಗಮಿಸಿ ಸಕಲ ವಿಧಿ-ವಿಧಾನಗಳ ಮೂಲಕ ಅಂತ್ಯಕ್ರಿಯೆ ಜರುಗಿತು. ಈ ಸಂದರ್ಭದಲ್ಲಿ ಶಾಖಾ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ, ಕಾದರವಳ್ಳಿ ಅದೃಶ್ಯಾನಂದ ಸ್ವಾಮಿಜಿ, ಗದಗ ಶಾಂತಮ್ಮತಾಯಿ, ಶಿಶುವಿನಹಳ್ಳಿಯ ನಿಜಗುಣಾನಂದ ಸ್ವಾಮಿಜಿ, ಹರಳಗಟ್ಟಿ ವಿದ್ಯಾನಂದ ಸ್ವಾಮಿಜಿ, ನಿರ್ವಾಣಹಟ್ಟಿ ಶಿವಾನಂದ ಸರಸ್ವತಿ ಸ್ವಾಮಿಜಿ, ತಾವಲಗೇರಿ ಚಂದ್ರಶೇಖರ ಸ್ವಾಮಿಜಿ, ಕೆಳಗೇರಿ ಯೋಗಾನಂದ ಸ್ವಾಮಿಜಿ, ರಾಯರ ಹೆಬ್ಬಳ್ಳಿ ಮಹೇಶಾನಂದ ಸ್ವಾಮಿಜಿ, ಗಣಿಕೊಪ್ಪ ಸದಾಶಿವ ಸ್ವಾಮಿಜಿ, ಮಾಟೋಳ್ಳಿಯ ಚನ್ನಬಸವದೇವರು, ಬನಹಟ್ಟಿ ಮಲ್ಲೇಶ ಶರಣರು, ಆಸಂಗಿ ನರಸಿಂಹ ಸ್ವಾಮಿಜಿ, ಬದಾಮಿ ಸಿದ್ರಾಮ ಶಾಸ್ರ್ತಿಗಳು, ಹುಲ್ಲೂರು ನಿಜಗುಣ ಸ್ವಾಮಿಜಿ ಹಾಗೂ ವಿವಿಧ ಮಠಾಧೀಶರು, ಸಹಸ್ರಾರು ಸದ್ಭಕ್ತರು ಇದ್ದರು.