ಕೊವಿದ್-19: ದೇಶದಲ್ಲಿ ಇದುವರೆಗೆ 1,251 ಪ್ರಕರಣಗಳು ದೃಢ, ಸಾವಿನ ಸಂಖ್ಯೆ 32ಕ್ಕೆ ಏರಿಕೆ

ನವದೆಹಲಿ, ಮಾರ್ಚ್ 30, ದೇಶದಲ್ಲಿ ಕೊವಿದ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ ಮಂಗಳವಾರ 1,251 ಕ್ಕೆ ಏರಿದ್ದು, ಜಿಲ್ಲಾ ಮಟ್ಟದಿಂದ ಹೊಸ ಮಾಹಿತಿ ಕಾಯುತ್ತಿರುವುದರಿಂದ ಸಂಖ್ಯೆ ಬದಲಾಗುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ.ಸಂಪೂರ್ಣ ಲಾಕ್‌ಡೌನ್‌ನಲ್ಲಿ ಇಡೀ ದೇಶ ಏಳನೇ ದಿನವನ್ನು ಪ್ರವೇಶಿಸುತ್ತಿದ್ದಂತೆ, ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 32 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಇಲ್ಲಿಯವರೆಗೆ  ಒಟ್ಟು 101 ಪ್ರಕರಣಗಳನ್ನು ಗುಣಪಡಿಸಲಾಗಿದ್ದು, ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಇವರಲ್ಲಿ ಒಬ್ಬ ವ್ಯಕ್ತಿ ವಲಸೆ ಬಂದವರಾಗಿದ್ದಾರೆ. ಸದ್ಯ, ದೇಶಾದ್ಯಂತ ಸೋಂಕಿತ ಪ್ರಕರಣಗಳ ಸಂಖ್ಯೆ 1,117ರಷ್ಟಿದೆ.ನಿಜಾಮುದ್ದೀನ್‍ ಪ್ರದೇಶದ ಮಸೀದಿಯಲ್ಲಿ 1,400ಕ್ಕೂ ಹೆಚ್ಚು ಮಂದಿ ಸೇರಿದ್ದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸೋಮವಾರ, ರಾಷ್ಟ್ರ ರಾಜಧಾನಿಯ ವಿವಿಧ ಆಸ್ಪತ್ರೆಗಳಲ್ಲಿ 200 ಕ್ಕೂ ಹೆಚ್ಚು ಶಂಕಿತ ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಸೀದಿಯಲ್ಲಿ ಸೇರಿದ್ದ ಜನರು ತಮ್ಮ ಸ್ವಂತ ಸ್ಥಳಗಳಿಗೆ ಹಿಂತಿರುಗಿದ ನಂತರ ಆರು ಜನರಲ್ಲಿ ಸೋಂಕು ದೃಢಪಟ್ಟಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಸಾಮಾಜಿಕ ಅಂತರದ ಕ್ರಮಗಳನ್ನು ಪಾಲಿಸದೆ ಬೃಹತ್ ಸಂಖ್ಯೆಯಲ್ಲಿ ತಮ್ಮ ಸ್ವಂತ ಸ್ಥಳಗಳಿಗೆ ವಾಪಸ್ಸಾಗಲು ಆರಂಭಿಸಿದ ನಂತರ ರೋಗ ಹರಡುವಿಕೆ ತಡೆಗಟ್ಟಲು ರಾಜ್ಯಗಳ ಗಡಿಗಳನ್ನು ಮುಚ್ಚಲಾಗಿದೆ.