ಬನಶಂಕರಿ ದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಬ್ಯಾಡಗಿ 15: ಸ್ಥಳೀಯ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ನಾಡಿನ ಶಕ್ತಿ ದೇವತೆ ಬನಶಂಕರಿ ದೇವಿಯ ರಥೋತ್ಸವವು ಸಡಗರ ಹಾಗೂ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬನದ ಹುಣ್ಣಿಮೆಯ ಸೊಬಗಿನ ದಿನದಂದು ಬನಶಂಕರಿ ರಥೋತ್ಸವದ ತೇರನ್ನು ಭಕ್ತರು ಎಳೆದು ಕಣ್ತುಂಬಿಕೊಂಡರು.ಭಕ್ತರು ಶಂಭೂಕೋ ಎಂದು ಜಯಘೋಷ ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು.ವೈವಿಧ್ಯಮಯ ರೀತಿಯಿಂದ ಸಿಂಗಾರಗೊಂಡು ಸರ್ವಾಲಂಕಾರಭೂಷಿತೆಯಾಗಿದ್ದ ಶಾಕಾಂಬರಿ ಮೂರ್ತಿಯನ್ನು ಅರ್ಚಕರು ಪಲ್ಲಕ್ಕಿಯಲ್ಲಿ ಹೊತ್ತುತಂದು ತೇರಿನಲ್ಲಿ ಮೆರವಣಿಗೆ ಇದಕ್ಕೆ ಸಾಥ್ ನೀಡಿತು.
ದೇವಸ್ಥಾನದ ಎದುರಿನ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಕಿರಿಯರೆಲ್ಲರೂ ಉತ್ಸಾಹದಲ್ಲಿ ನೆರೆದಿದ್ದರು. ರಥಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಘೋಷಣೆ, ಚಪ್ಪಾಳೆ ಮೊಳಗಿದವು. ಹಗ್ಗಕ್ಕೆ ಕೈ ಹಾಕಿ ತೇರು ಎಳೆದು ಸಂಭ್ರಮಿಸಿದರು. ಪೈಪೋಟಿಗೆ ಬಿದ್ದು ಉತ್ತತ್ತಿ, ಕೊಬ್ಬರಿ, ನಿಂಬೆ, ಬಾಳೆ ಹಣ್ಣು ಕಳಶದತ್ತ ತೂರಿದರು. ಬನಶಂಕರಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಹರಕೆ ಹೊತ್ತ ಭಕ್ತರು ಗುಡಿಗೆ ಬಂದು ಸೇವೆ ಸಲ್ಲಿಸಿದರು.ನಸುಕಿನಿಂದಲೇ ಸಾಲುಗಟ್ಟಿ ದೇವಿಯ ದರ್ಶನ ಪಡೆದ ಭಕ್ತರು ಹೋಳಿಗೆ, ಕಡುಬು, ಗೋಧಿ ಹುಗ್ಗಿಯ ನೈವೇದ್ಯ ಅರ್ಿಸಿದರು.ಅಂದು ಮುಂಜಾನೆ 4-30 ಕ್ಕೆ ಶ್ರೀದೇವಿಗೆ ಅಭಿಷೇಕ ಕ್ಷಿರಾಭೀಷಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಉಡಿ ತುಂಬುವುದು ವಿಶೇಷ ಶಾಕಾಂಬರಿ ಹಾಗೂ ಮೃತ್ಯುಂಜಯ ಹೋಮ, ಕುಮಾರಿಕಾ ಪಾದ ಪೂಜೆ ನೆರವೇರಿದವು. ಬೆಳಿಗ್ಗೆ 10 ಘಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 1 ಘಂಟೆಗೆ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು.