ವಿಶ್ವಾದ್ಯಂತ 46 ಲಕ್ಷ ದಾಟಿದ ಕೊವಿಡ್‍-19 ಪ್ರಕರಣಗಳ ಸಂಖ್ಯೆ

ಜಿನೀವಾ, ಮೇ 19,ಕಳೆದ 24 ತಾಸಿನಲ್ಲಿ 93,324 ಪ್ರಕರಣಗಳು ದೃಢಪಡುವುದರೊಂದಿಗೆ ಜಾಗತಿಕವಾಗಿ ಕೊರೊನವೈರಸ್‍ ಪ್ರಕರಣಗಳ ಸಂಖ್ಯೆ 46 ಲಕ್ಷ ದಾಟಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3 ಲಕ್ಷ 11 ಸಾವಿರಕ್ಕೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವಿಶ್ವದಾದ್ಯಂತ ಸದ್ಯ ಕೊವಿಡ್‍-19 ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 46,18,821ರಷ್ಟಿದೆ. ಕಳೆದ 24 ತಾಸಿನಲ್ಲಿ ಸೋಂಕಿಗೆ 4,452 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 3,11,837ಕ್ಕೆ ಮುಟ್ಟಿದೆ ಎಂದು ವಿಶ್ವಆರೋಗ್ಯ ಸಂಸ್ಥೆಯ ನವೀಕೃತ ಮಾಹಿತಿ ಮಂಗಳವಾರ ತಿಳಿಸಿದೆ.

ಅಮೆರಿಕದಲ್ಲಿ 50,879 ಪ್ರಕರಣಗಳ ಏರಿಕೆಯೊಂದಿಗೆ ಅತಿಹೆಚ್ಚು 20,17,811 ಕೊವಿಡ್‍-19 ಪ್ರಕರಣಗಳು ವರದಿಯಾಗಿವೆ.ಕಳೆದ 24 ತಾಸಿನಲ್ಲಿ 2,810 ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ1,21,609 ಕ್ಕೆ ತಲುಪಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್‍ 11ರಂದು ಕೊರೊನವೈರಸ್‍ ಅನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗವೆಂದು ಘೋಷಿಸಿತ್ತು. ಜಾನ್ಸ್‍ ಹಾಪ್‍ಕಿನ್ಸ್‍ ವರದಿಯಂತೆ ಜಾಗತಿಕ ಪ್ರಕರಣಗಳ ಸಂಖ್ಯೆ 47,82,539ಕ್ಕೆ ಮುಟ್ಟಿದ್ದು, ಸಾವಿನ ಸಂಖ್ಯೆ 3,17,566ಕ್ಕೆ ತಲುಪಿದೆ. ಮಾರಕ ಸೋಂಕಿನಿಂದ ಇದುವರೆಗೆ 17,76,388 ಮಂದಿ ಚೇತರಿಸಿಕೊಂಡಿದ್ದಾರೆ.