ಪ್ರಯಾಗ್ ರಾಜ್, ನ 18 : ಸ್ವಾತಂತ್ರ್ಯಪೂರ್ವ ಚಳವಳಿಯಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯಾಲಯವಾಗಿದ್ದ ಆನಂದ್ ಭವನ್ ಗೆ ತೆರಿಗೆ ಪಾವತಿಸದ ಆರೋಪದ ಮೇಲೆ ಪ್ರಯಾಗ್ ರಾಜ್ ಪುರಸಭೆ ನೋಟಿಸ್ ಜಾರಿ ಮಾಡಿದೆ. ಆನಂದ್ ಭವನ, ಸ್ವರಾಜ್ ಭವನ ಮತ್ತು ಜವಹರ್ ತಾರಾಲಯದ ಮೂರು ಕಟ್ಟಡಗಳ ಒಟ್ಟು 4.33 ಕೋಟಿ ರೂ. ಗೃಹ ತೆರಿಗೆ ಪಾವತಿ ಬಾಕಿಯಿದೆ. ಈ ಎಲ್ಲಾ ಕಟ್ಟಡಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಪಕ್ಷದ ಸದಸ್ಯರ ನೇತೃತ್ವದ ಜವಹರ್ ಲಾಲ್ ನೆಹರು ಸ್ಮಾರಕ ನಿಧಿಯಿಂದ ನಡೆಸಲಾಗುತ್ತಿದೆ. ಈ ಕಟ್ಟಡಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದರಿಂದ ತೆರಿಗೆ ಪಾವತಿಸಬೇಕು ಎಂದು ನೋಟಿಸ್ ತಿಳಿಸಿದೆ. ಮುಖ್ಯ ತೆರಿಗೆ ಅಧಿಕಾರಿ ಪಿ.ಕೆ.ಮಿಶ್ರಾ ಪ್ರಕಾರ, ಎರಡು ವಾರಗಳ ಹಿಂದೆಯೇ ನೋಟಿಸ್ ಜಾರಿಯಾಗಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ನಿಧಿಯ ಕಾರ್ಯದರ್ಶಿ ಎನ್. ಬಾಲಕೃಷ್ಣನ್ ಅವರು ಸರ್ವೆ ವರದಿ ಮತ್ತು ಬಾಕಿ ಹಣದ ಇತರ ಮಾಹಿತಿಗಳನ್ನು ಕೋರಿ ಪತ್ರ ಬರೆದಿದ್ದಾರೆ.