ಸಂಸ್ಕೃತಿಯ ಸದ್ದು ‘ಗುಂಮ್ಟಿ’ ಟ್ರೇಲರ್ ಬಿಡುಗಡೆ

ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ 

ನಿರ್ದೇಶಕ ಸಂದೇಶ ಶೆಟ್ಟಿ ಆಜ್ರೆ ಆ್ಯಕ್ಷನ್‌-ಕಟ್ ಹೇಳಿ ನಾಯಕನಾಗಿ ಅಭಿನಯಿಸಿರುವ ‘ಗುಂಮ್ಟಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ. ಅಳಿವಿನ ಅಂಚಿನಲ್ಲಿರುವ ‘ಗುಂಮ್ಟಿ’ ಎಂಬ ಜಾನಪದ ಕಲೆಯ ಸುತ್ತ ಈ ಸಿನಿಮಾ ಕಥೆ ಸಾಗುತ್ತದೆ. ಉಡುಪಿ, ಕುಂದಾಪುರ ಸುತ್ತ ಮುತ್ತಲಿನ ಭಾಗದಲ್ಲಿ ಕುಡುಬಿ ಜನಾಂಗ ಹೆಚ್ಚಾಗಿದೆ. ಹಿಂದುಳಿದ ಈ ಜನಾಂಗ ಆಚರಿಸುವ ಜಾನಪದ ಕಲೆ ‘ಗುಂಮ್ಟಿ’. ಈ ಸಂಸ್ಕೃತಿ ಹಾಗೂ ಕುಡುಬಿ ಜನಾಂಗವನ್ನು ಮುಖ್ಯವಾಗಿಟ್ಟುಕೊಂಡು ಸಿದ್ದವಾದ ಚಿತ್ರವೇ ‘ಗುಂಮ್ಟಿ’. ಈಗಾಗಲೇ ಹಾಡಿನ ಮೂಲಕ ಸೌಂಡ್ ಮಾಡಿರುವ ಈ ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಕಮ್ ನಟ ಸಂದೇಶ ಶೆಟ್ಟಿ ಆಜ್ರೆ ‘ನಾನಿಲ್ಲಿ ಕಾಶಿ ಎಂಬ ಪಾತ್ರ ಮಾಡಿದ್ದು, ಇದು ನನ್ನ ನಿರ್ದೇಶನದ ಮೂರನೇ ಸಿನಿಮಾ. ಈ ಮೊದಲು ಕಮರ್ಷಿಯಲ್ ಸಿನಿಮಾ ಮಾಡಿದ್ದೆ. ಈಗ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕುಂದಾಪುರ ಕನ್ನಡ ಭಾಷೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ರೀಲೀಸ್‌ಗೂ ಮೊದಲೇ ಒಟಿಟಿ ನವರು ಸಿನಿಮಾ ಕೇಳತಾ ಇದ್ದು, ಸದ್ಯದಲ್ಲೇ ವ್ಯವಹಾರ ಆಗಲಿದೆ. ಇನ್ನು ಒಂದಿಷ್ಟು ಫಿಲ್ಮ್‌ ಪೆಸ್ಟಿವೆಲ್‌ಗಳಿಗೆ ಚಿತ್ರವನ್ನು ಕಳಿಸಲಾಗಿದೆ. ಇದೊಂದು ಸಾಂಪ್ರದಾಯಿಕವಾದ ಕಲಾತ್ಮಕ ಸಿನಿಮಾ. ಡಿಸೆಂಬರ್‌ನಲ್ಲಿ ಸಿನಿಮಾ ರೀಲೀಸ್ ಪ್ಲ್ಯಾನ್ ಮಾಡತಾ ಇದ್ದೇವೆ. ಈಗಾಗಲೇ ಕುಂದಾಪುರ, ಉಡುಪಿ ಹಾಗೂ ಬೈಂದೂರುನಲ್ಲಿ ಒಟ್ಟು 22 ಶೋಗಳ ಟಿಕೆಟ್ ಮಾರಟ ಮಾಡಲಾಗಿದೆ’ ಎನ್ನುವರು.  

ನಂತರ ಚಿತ್ರದ ನಿರ್ಮಾಪಕ ವಿಕಾಸ್ ಎಸ್ ಶೆಟ್ಟಿ ಮಾತನಾಡಿ, ‘ನಿರ್ದೇಶಕರು ನಮ್ಮ ಗೆಳೆಯ. ‘ಗುಂಮ್ಟಿ’ ಬಗ್ಗೆ ಕೇಳಿದಾಗ ನಂಗೆ ಇಷ್ಟ ಆಯ್ತು. ನಾನೂ ಕೂಡ ಚಿಕ್ಕವನಾಗಿದ್ದಾಗ ಈ ಸಂಪ್ರದಾಯ ನೋಡಿದ್ದೆ. ಇದು ಕಂಟೆಂಟ್ ಒರೆಂಟೆಡ್ ಸಿನಿಮಾ. ತುಂಬಾ ಅದ್ಭುತವಾಗಿ ಬಂದಿದೆ’ ಎಂದು ಹೇಳಿದರು. ಚಿತ್ರದ ನಾಯಕಿ ವೈಷ್ಣವಿ ನಾಡಿಗ ‘ಈ ಚಿತ್ರದ ಮೂಲಕ ನಾನು ಹೊಸ ಸಂಸ್ಕೃತಿ ಬಗ್ಗೆ ತಿಳಿದುಕೊಂಡೆ. ಇದು ನನ್ನ ಮೊದಲ ಪ್ರಯತ್ನ. ಹಾಗಾಗಿ ಇದೊಂದು ಸ್ಪೆಷಲ್ ಸಿನಿಮಾ ನನಗೆ’ ಎಂದರು. ಮೂಲತಃ ಪತ್ರಕರ್ತೆಯಾದ ಚಿತ್ರಕಲಾ ಈ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಯಿಸಿದ್ದು, ‘ನಾನು ಮೂಲತಃ ಪತ್ರಕರ್ತೆ ಆಗಿದ್ದರೂ ‘ಗುಂಮ್ಟಿ’ ಬಗ್ಗೆ ಎಲ್ಲಿಯೂ ಕೇಳಿರಲಿಲ್ಲ. ಇಂತಹ ಸಾಕಷ್ಟು ಸಂಸ್ಕೃತಿಗಳು ಇಂದು ಅಳಿವಿನ ಅಂಚಿನಲ್ಲಿವೆ. ಇಂತಹ ಸಿನಿಮಾಗಳು ಹೆಚ್ಚಾಗಿ ಬಂದು, ಮುಂದಿನ ತಲೆಮಾರುಗಳಿಗೆ ಜನಾಂಗದ ಆಚರಣೆ, ಸಂಸ್ಕೃತಿಗಳು ತಿಳಿಯುವಂತೆ ಆಗಬೇಕು. ಆ ದೃಷ್ಠಿಯಿಂದ ಇಂತಹ ಚಿತ್ರಗಳನ್ನು ಜನರು ಪ್ರೋತ್ಸಾಹ ನೀಡಬೇಕು’ ಎನ್ನುವರು ಚಿತ್ರಕಲಾ. 

‘ಇದು ಸಂಸ್ಕೃತಿಯ ಸದ್ದು’ ಎಂಬ ಅಡಿಬರಹವಿರುವ ಈ ಚಿತ್ರವನ್ನು ಸೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕುಂದಾಪುರ, ಉಡುಪಿ ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರಕ್ಕೆ ದುಂಡಿ ಮೋಹನ್ ಸಂಗೀತ, ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ. ಕಾರ್ಯಕ್ರಮದಲ್ಲಿ ನಟ ಯಶ್ ಆಚಾರ್ಯ ‘ಕುಡುಬಿ ಜನಾಂಗದವರು ತುಂಬಾ ಜನ ವಿದ್ಯಾವಂತರು ಇದ್ದು, ಎಲ್ಲಿದ್ದರೂ ಹೋಳಿ ಹಬ್ಬಕ್ಕೆ ಬಂದು ಆಚರಣೆ ಮಾಡುತ್ತಾರೆ’ ಎಂದರು. ವೇದಿಕೆಯಲ್ಲಿ ವಿತರಕ ವಿಜಯ್ ಸಿನಿಮಾ ರೀಲೀಸ್ ಬಗ್ಗೆ ಮಾತನಾಡಿದರು.