ಬೆಂಗಳೂರು, ಏ.1 ಕೊರೊನಾ ಸೋಂಕಿನ ಭೀತಿಯನ್ನೇ ದುರುಪಯೋಗಪಡಿಸಿಕೊಂಡು ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಶಿವಕುಮಾರ್ ಬಂಧಿತ ಆರೋಪಿ. ಈತ ಶ್ರೀರಾಂಪುರ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಐಸೋಪ್ರೊಪೈಲ್ ಆಲ್ಕೋಹಾಲ್ ಜೊತೆಗೆ ಇತರೆ ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಂಗಳವಾರ ತಡರಾತ್ರಿ ದಾಳಿ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತನಿಂದ 180 ಲೀಟರ್ ಐಸೋಪ್ರೊಫೈಲ್ ಆಲ್ಕೋಹಾಲ್, 10 ಲೀಟರ್ ಗ್ಲಿಸರಿನ್ ಹಾಗೂ 65 ಲೀಟರ್ ಸರ್ಫೇಸ್ ಸ್ಯಾನಿಟೈಸರ್, 100 ಎಂಎಲ್ 5382 ಬಾಟೆಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಿನ್ನೆಯಷ್ಟೇ ಕಲ್ಯಾಣನಗರದಲ್ಲಿ ನಕಲಿ ಮಾಸ್ಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.