ಕನ್ನಡ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಸಾಹಿತ್ಯ ಜನಪದ ಸಾಹಿತ್ಯವಾಗಿದೆ: ಟಿ.ಎಸ್.ಒಂಟಗೊಡಿ
ಬೆಟಗೇರಿ 05 :ಎಲ್ಲ ಸಾಹಿತ್ಯಗಳಲ್ಲಿ ಜನಪದ ಸಾಹಿತ್ಯ ಸರಳ ಸುಂದರ ಹಾಗೂ ಶ್ರೀಮಂತ ಸಾಹಿತ್ಯವಾಗಿದೆ. ಜನಪದವೆಂಬುವುದು ವಿದ್ವಾಂಸರ ಪೆನ್ನಿನಿಂದ ಬಂದ ಸಾಹಿತ್ಯವಲ್ಲ, ಮಣ್ಣಿನಲ್ಲಿ ಬೆವರು ಕಲಿಸಿ ದುಡಿಯುವ ಮಣ್ಣಿನ ಮಕ್ಕಳ ಸಮುದಾಯವೇ ಜನಪದವಾಗಿದೆ ಎಂದು ಹಾರೂಗೇರಿ ಶ್ರೀ ಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ಟಿ.ಎಸ್.ಒಂಟಗೊಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜ್ಞಾನಜ್ಯೋತಿ ಬೇಸಿಗೆ ತರಬೇತಿ ಶಿಬಿರದ ಸಭಾಭವನದಲ್ಲಿ ಮೇ.4ರಂದು ನಡೆದ ಜನಪದ ಸಾಹಿತ್ಯ ಅಂದು ಇಂದು ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯತಿಥಿಗಳಾಗಿ ಮಾತನಾಡಿ, 10ನೇ ಶತಮಾನದ ಪಂಪನ ಕಾವ್ಯ ಕಬ್ಬು ಸವಿದಂತೆ, ಕುಮಾರವ್ಯಾಸನ ಕಾವ್ಯ ಸುಲಿದ ಬಾಳೆಹಣ್ಣಿನಂತೆ, ಬಸವಣ್ಣನ ವಚನ ದ್ರಾಕ್ಷಿಹಣ್ಣು ಸವಿದಂತೆ ಎಂದರು.
ನಮ್ಮ ಜನಪದ ಸಾಹಿತ್ಯ ಕಾಯಿಸಿ ಆರಿಸಿದ ಹಾಲು ಕುಡಿದಂತೆ, ಹಳೆಬೇರು ಹೊಸಚಿಗುರು ಕೂಡಿರಲು ಮರ ಸೂಬಗು ಎನ್ನುವಂತೆ ಕನ್ನಡ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಸಾಹಿತ್ಯ ಜನಪದ ಸಾಹಿತ್ಯವಾಗಿದೆ. ಜನಪದ ಸಾಹಿತ್ಯ ಜನಪದರು ಪ್ರಕೃತಿಯ ಆರಾಧಕರು ಆಸರಿಕೆ, ಬೇಸರಿಕೆ, ನೋವು, ನಲಿವು ದು:ಖ ದುಮ್ಮಾನವಾದಾಗ ಅವರ ಪಟ್ಟುಪಾಡೆಲ್ಲವೋ ಹಾಡಾದವು. ಕನ್ನಡ ಸಾಹಿತ್ಯದ ತಾಯಿಬೇರು ಜನಪದ ಸಾಹಿತ್ಯ ಖ್ಯಾತ ಜನಪದ ವಿದ್ವಾಂಸ ಡಾ.ಬೆಟಗೇರಿ ಕೃಷ್ಣಶರ್ಮರ ಗ್ರಾಮದಲ್ಲಿ ಹುಟ್ಟಿರುವ ನಿವೇಲ್ಲರೂ ಧನ್ಯರು ಎಂದು ಸಾಹಿತಿ ಟಿ.ಎಸ್.ಒಂಟಗೂಡಿ ಅವರು ಅಭಿಮತ ವ್ಯಕ್ತಪಡಿಸಿದರು.
ಸ್ಥಳೀಯ ಶಿಕ್ಷಣ ಪ್ರೇಮಿ ಲಖನ ಚಂದರಗಿ ಅಧ್ಯಕ್ಷತೆ ವಹಿಸಿ ಜನಪದ ಸಾಹಿತ್ಯದ ಕುರಿತು ಮಾತನಾಡಿದರು. ಸಾಹಿತಿ ಟಿ.ಎಸ್.ಒಂಟಗೊಡಿ ಅವರನ್ನು ಗೌರವಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಶಿಕ್ಷಕಿ ರಾಜಶ್ರೀ ಚಂದರಗಿ, ರೂಪಾ ಬಿ.ಪಾಟೀಲ, ಲಕ್ಷ್ಮಿ ಕರಿಗಾರ, ಹೇಮಾ ವಗ್ಗರ, ನಾಗರಾಜ ಕಂಬಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು, ಮತ್ತಿತರರು ಇದ್ದರು.