ದಿಗ್ಗಜ ಹಾಕಿ ಆಟಗಾರ ಬಲಬೀರ್ ಸಿಂಗ್ ನಿಧನ

ಚಂಡೀಗರ್, ಮೇ 25,ಭಾರತ ಹಾಕಿ ತಂಡದ ಸ್ಟಾರ್ ಆಟಗಾರ ಹಾಗೂ ದೇಶಕ್ಕೆ ಮೂರು ಒಲಿಂಪಿಕ್ಸ್ ಬಂಗಾರವನ್ನು ತೊಡಿಸಿದ ತಂಡದ ಸದಸ್ಯ ದಿಗ್ಗಜ ಬಲಬೀರ್ ಸಿಂಗ್ ಸೀನಿಯರ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಬಲಬೀರ್ ಅವರು ಬಹುದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಮೊಹಾಲಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಉಸಿರಾಟದ ತೊಂದರೆ ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಬಲ್ಬೀರ್ ಸಿಂಗ್ ಸೀನಿಯರ್ ಅವರನ್ನು ಮೇ 8 ರಂದು ಆಸ್ಪತ್ರೆಗೆ ಸೇರಿಸಲಾಯಿತು. ಅವರು ಮೇ 18 ರವರೆಗೆ ಅರೆ ಪ್ರಜ್ಙಾ ಹೀನ ಸ್ಥಿತಿಯಲ್ಲಿದ್ದರು. ಮತ್ತು ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ನ್ಯುಮೋನಿಯಾ ಮತ್ತು ತೀವ್ರ ಜ್ವರ ಬಂದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಅಭಿಜೀತ್ ಸಿಂಗ್ ಅವರ ಸಾವನ್ನು ದೃಢಪಡಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ (1948), ಹೆಲ್ಸಿಂಕಿ (1952) ಮತ್ತು ಮೆಲ್ಬೋರ್ನ್‌ನಲ್ಲಿ (1956) ಭಾರತದ ಚಿನ್ನದ ಪದಕ ಗೆಲ್ಲುವಲ್ಲಿ ಬಲ್ಬೀರ್ ಸಿಂಗ್ ಸೀನಿಯರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ 6–1 ಗೋಲುಗಳಿಂದ ಭಾರತ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಅವರು ಐದು ಗೋಲುಗಳನ್ನು ಹೊಡೆದರು. ಮತ್ತು ಈ ದಾಖಲೆ ಇನ್ನೂ ಹಾಗೇ ಇದೆ. 1975 ರ ವಿಶ್ವಕಪ್ ವಿಜೇತ ಭಾರತೀಯ ಹಾಕಿ ತಂಡದ ವ್ಯವಸ್ಥಾಪಕರಾಗಿದ್ದರು. ಬಲ್ಬೀರ್ ಸಿಂಗ್ ಸೀನಿಯರ್ ಭಾರತ ಮಾತ್ರವಲ್ಲ, ವಿಶ್ವದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಆಧುನಿಕ ಒಲಿಂಪಿಕ್ಸ್ ಇತಿಹಾಸದಿಂದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಆಯ್ಕೆ ಮಾಡಿದ 16 ಶ್ರೇಷ್ಠ ಒಲಿಂಪಿಯನ್‌ಗಳಲ್ಲಿ ದೇಶದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಬಲ್ಬೀರ್ ಕೂಡ ಒಬ್ಬರು.