ಕೈಗಾರಿಕಾ ಉತ್ಪಾದನೆ ಪ್ರಮಾಣ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟ

ನವದೆಹಲಿ, ನ 12 :   ಬಂಡವಾಳ ಸರಕು, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿ ಗಣನೀಯ ಕುಸಿತದೊಂದಿಗೆ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.     ರಾಷ್ಟ್ರೀಯ ಅಂಕಿ-ಸಂಖ್ಯೆಗಳ ಕಚೇರಿ (ಎನ್ಎಸ್ಓ) ಸೋಮವಾರ ಬಿಡುಗಡೆ ಮಾಡಿದ ವರದಿ ಅನ್ವಯ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಸೆಪ್ಟೆಂಬರ್ನಲ್ಲಿ 4.3% ಇಳಿದಿದೆ. ಆಗಸ್ಟ್ ನಲ್ಲಿ 1.4% ಕುಸಿತ ಕಂಡ ಬಳಿಕ ಸತತ ಎರಡನೇ ತಿಂಗಳು ಕೂಡಾ ಸೂಚ್ಯಂಕ ಇಳಿಕೆ ಕಂಡಿದೆ.     ಈ ವರ್ಷ ಆರಂಭದಲ್ಲಿ ಎಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ವಾರ್ಷಿಕ 1.3% ಪ್ರಗತಿ ಕಂಡು ಬಂದಿತ್ತು. ಆದರೆ ಇದೇ ಅವಧಿಯಲ್ಲಿ ಕಳೆದ ವರ್ಷ ಶೇ 5.2 ರಷ್ಟು ಪ್ರಗತಿಯಾಗಿತ್ತು.     ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಶುದ್ಧೀಕರಣ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಈ ಎಂಟು ಪ್ರಮುಖ ವಲಯಗಳ ಕೊಡುಗೆ ಶೇಕಡ 40ರಷ್ಟು ಇದ್ದು, ಸೆಪ್ಟೆಂಬರ್ ನಲ್ಲಿ ಈ ವಲಯದಲ್ಲಿ ತೀವ್ರ ಕುಸಿತ ಕಂಡು ಬಂದಿತ್ತು.    ಕೈಗಾರಿಕೆಗಳ ಮಾನದಂಡದಲ್ಲಿ 23 ಕೈಗಾರಿಕಾ ಸಮೂಹಗಳ ಪೈಕಿ 17 ಗುಂಪುಗಳಲ್ಲಿ ಕುಸಿತ ಕಂಡು ಬಂದಿದೆ. ವಾಹನಗಳ ಉತ್ಪಾದನೆ ಶೇಕಡ 24.8ರಷ್ಟು ಕುಸಿದಿದ್ದರೆ, ಪೀಠೋಪಕರಣಗಳ ಉತ್ಪಾದನೆ ಶೇಕಡ 22ರಷ್ಟು ಕುಸಿದಿದೆ. ಫ್ಯಾಬ್ರಿಕೇಟೆಡ್ ಲೋಹ ಉತ್ಪನ್ನಗಳ ವಲಯದಲ್ಲಿ ಶೇ 22 ರಷ್ಟು ಕುಸಿತ ಕಂಡು ಬಂದಿದೆ.    ಸೆಪ್ಟೆಂಬರ್ 2019 ರಲ್ಲಿ ಕೈಗಾರಿಕಾ ವಲಯದಲ್ಲಿ ಕುಸಿತ ಕಂಡು ಬಂದಿದ್ದು ಅದು ಅಕ್ಟೋಬರ್ ತಿಂಗಳಲ್ಲೂ ಮುಂದುವರಿದಿದೆ.