ಮಹಾರಾಷ್ಟ್ರ ಮೈತ್ರಿ ಸರ್ಕಾರದ ಬಳಿಕ ದೇಶದ ಚಿತ್ರಣವೇ ಬದಲಾಗಲಿದೆ: ಎಚ್.ಡಿ.ದೇವೇಗೌಡ

DEVEGOUD


ಮೈಸೂರು,  ನ.27 - ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಬೇಕೆಂಬ ಗುರಿ ಕಾಂಗ್ರೆಸ್ ಹಾಗೂ  ಜೆಡಿಎಸ್‌ಗೆ ಇದೆಯೇ ಹೊರತು ಒಟ್ಟಾಗಿ ಚುನಾವಣೆಗೆ ಹೋಗುವುದಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್ ಒಟ್ಟಾಗಿ ಹೋಗಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ  ಎರಡೂ ಪಕ್ಷಗಳು ಒಂದಾಗಿ ಹೋಗುತ್ತವೆ ಎಂದು ಹೇಳುತ್ತಿರುವುದೆಲ್ಲ ಆಧಾರರಹಿತ. ಮೈತ್ರಿ  ಸರ್ಕಾರ ಪತನವಾದ ಬಳಿಕ ಕಾಂಗ್ರೆಸ್, ಜೆಡಿಎಸ್ ದೂರದೂರ ಎಂದರು.

ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಹೊಸ ಮೈತ್ರಿ ಸರ್ಕಾರ ಐದು ವರ್ಷ ಯಶಸ್ವಿಯಾಗಿ ಕಾರ್ಯ  ನಿರ್ವಹಿಸಿದರೆ ಭವಿಷ್ಯದಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ. ಯಾರೂ ಊಹಿಸದಂತೆ  ಎನ್‌ಸಿಪಿ, ಕಾಂಗ್ರೆಸ್, ಶಿವಸೇನೆ ಒಂದಾಗಿವೆ. ಸದ್ಯದಲ್ಲಿ ದೇಶದ ರಾಜಕೀಯ ಪರಿಸ್ಥಿತಿ  ಬೇರೆಯದ್ದೇ ರೂಪ ಪಡೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಹೊಸ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಮುಖ್ಯವಾಗುತ್ತದೆ‌ ಎಂದು ಹೇಳಿದರು.ದೇಶದಲ್ಲಿ ನಡೆಯುತ್ತಿರುವ ಏಕಸ್ವಾಮ್ಯ ನಿರ್ಧಾರಗಳ ಬಗ್ಗೆ ಜನ ಆಕ್ರೋಶ ಹೊಂದಿದ್ದಾರೆ‌. ಐಟಿ,  ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಬೇರೆ ಪಕ್ಷದವರನ್ನು  ಬೆದರಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಯಾವೊಬ್ಬ ನಾಯಕರ ಮೇಲೆ ಇಂತಹ ದಾಳಿಗಳು ಏಕೆ  ನಡೆದಿಲ್ಲ. ಈ ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ‌ ಎಂದರು.