ಜನರ ಕಷ್ಟ ಕೇಳಲು ಹೋದ ಸಂಸದರೇ ನೀರು ಪಾಲು..!!

   ಪಾಟ್ನಾ, ಅ 3:  ಪ್ರವಾಹ ಪೀಡಿತ ಜನರ ಕಷ್ಟ ಕೇಳಲು ಹೋದ  ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಪರಿಸ್ಥಿತಿ ಪರಾಮರ್ಶಿ ಸಮಯದಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದು ಅವರನ್ನು ಸ್ಥಳೀಯ ಜನರೇ ರಕ್ಷಣೆ ಮಾಡಿದ್ದಾರೆ. ಈ ನಡುವೆ ಗುರುವಾರ ಮತ್ತು ಶುಕ್ರವಾರ ಮಳೆಯ ಅಬ್ಬರ ಮುಂದುವರಿಯಲಿದೆ  ಎಂದೂ  ಹವಾಮಾನ ಇಲಾಖೆ  ಮುನ್ಸೂಚನೆ  ನೀಡಿರುವ ಕಾರಣ ಪಾಟ್ನಾದಲ್ಲಿ ಶಾಲಾ ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.  ಪಾಟಲಿಪುರ ಕ್ಷೇತ್ರದ ಸಂಸದ ರಾಮ್ ಕೃಪಾಲ್ ಯಾದವ್ ದೋಣಿಯ ಮೇಲೆ ನಿಂತು ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದಾಗ ಆಯತಪ್ಪಿ ದೋಣಿ  ಮಗುಚಿಕೊಂಡ ಪರಿಣಾಮ ಸಂಸದರು ಸೇರಿದಂತೆ ಹಲವರು ನೀರಿನೊಳಕ್ಕೆ ಬಿದ್ದಿದ್ದರು. ಇದೇ ವೇಳೆ ನಿತೀಶ್ ಕುಮಾರ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, ಪ್ರವಾಹ ಪೀಡಿತ ಗ್ರಾಮೀಣ ಪ್ರದೇಶಗಳನ್ನು ಸರ್ಕಾರ ಕಡೆಗಣಿಸಿದೆ. ಆಹಾರದ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ಜಾನುವಾರುಗಳು ನೀರುಪಾಲಾಗಿವೆ. ಜನರನ್ನು ರಕ್ಷಿಸಲು ಸಮರ್ಪಕ ಸೌಲಭ್ಯಗಳಿಲ್ಲ. ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಸರಿಯಾಗಿ ದೋಣಿಯ ವ್ಯವಸ್ಥೆ ಕೂಡ ಮಾಡಿರಲಿಲ್ಲ ಎಂದೂ ಸಹ ಅವರು  ದೂರಿದರು.