ಭಾರತೀಯರಾಗಿರಲು ದೊಡ್ಡ ಶಕ್ತಿ ವೀರಾಂಜನೇಯ: ವಿಶ್ವೇಶ್ವರ ಹೆಗಡೆ ಕಾಗೇರಿ
ಹೊನ್ನಾವರ 09: ಅನೇಕ ಸಾಮಾಜಿಕ ಪಿಡುಗುಗಳ ಮದ್ಯೆ ಭಾರತೀಯರು, ಭಾರತೀಯರಾಗಿರಲು ದೊಡ್ಡ ಶಕ್ತಿ ವೀರಾಂಜನೇಯನಾಗಿದ್ದಾನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ, ಸಿಲೆಕ್ಟ್ ಫೌಂಡೇಶನ್ ವತಿಯಿಂದ ಗೇರಸೊಪ್ಪದ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನಾತನ ಸಂಸ್ಕೃತಿಯಲ್ಲಿ ಸಂಸ್ಕಾರ ಉಳಿಸಿ ಬೆಳೆಸುತ್ತಿರುವ ಜವಾಬ್ದಾರಿ ಎಲ್ಲರ ಹೊಣೆಯಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ, ಆಧುನಿಕತೆಯ ದುಷ್ಪರಿಣಾಮ, ಅನೇಕ ಸಾಮಾಜಿಕ ಪಿಡುಗುಗಳ ಮದ್ಯೆದಲ್ಲಿ ಭಾರತದಲ್ಲಿನ್ನು ಸಂಪ್ರದಾಯ ಸಂಸ್ಕೃತಿ ಜೀವಂತವಾಗಿದೆ. ಭವಿಷ್ಯದಲ್ಲಿ ನಮ್ಮೆಲ್ಲರ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ರಾಷ್ಟ್ರ ಕಾರ್ಯ ಮಾಡಲು ನಾವೆಲ್ಲ ಸದಾ ಸಿದ್ಧರಾಗಬೇಕಿದೆ ಎಂದರು.
ನಾನು ತಮ್ಮೆಲ್ಲರ ಆಶೀರ್ವಾದದಿಂದ ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ಜೊತೆಗೆ ನಿಮ್ಮವನೆಯಾದ ನಾನು ನಿಮ್ಮ ಸಮಸ್ಯೆಗಳನ್ನು ಅರಿತಿದ್ದೇನೆ. ಹೀಗೆ ಕ್ಷೇತ್ರದ ಅಭಿವೃದ್ಧಿಗಾಗಿ ರೈಲ್ವೇ ಹಾಗೂ ರಸ್ತೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಕಾರ್ಯಕ್ಕೆ ಅಣಿಯಾಗಿದ್ದು, ತಮ್ಮೆಲ್ಲರ ಸಹಕಾರದಿಂದ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದರು.
ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಕಡಿಮೆ ಅವಧಿಯಲ್ಲಿ ಶ್ರೀ ಕ್ಷೇತ್ರದ ಬೆಳವಣಿಗೆ ಅಪಾರವಾಗಿದೆ. ಸೇವೆಯ ಜೊತೆಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ಪೂಜ್ಯ ಮಾರುತಿ ಗುರೂಜಿ ಅವರಿಂದ ನಡೆಯುತ್ತಿದೆ ಎಂದರು. ದೇವಸ್ಥಾನದ ಧರ್ಮದರ್ಶಿಗಳಾದ ಮಾರುತಿ ಗುರೂಜಿ ಆಶೀರ್ವಚನ ನೀಡಿ, ಸಂಸ್ಕಾರ ಎಲ್ಲರಿಗೂ ಅವಶ್ಯಕವಾಗಿಬೇಕು.
ಜ್ಞಾನದಲ್ಲಿ ಸಂಸ್ಕಾರ ಮೇಳೈಸಿದರೆ ಅವನು ಸಜ್ಜನನಾಗುತ್ತಾನೆ. ಈ ನಿಟ್ಟಿನಲ್ಲಿ ಜ್ಞಾನ ಪಡೆದುಕೊಂಡು ಪ್ರತಿಯೊಬ್ಬರು ಸಜ್ಜನರಾಗಬೇಕು ಎಂದರು. ಮೈಲಾರದ ಗುರುಕುಲ ಮುನಿಸಿಂಹಾಸನಾಧಿಪತಿ ಗುರುವೆಂಕಟಪ್ಪ ಒಡೆಯರ್ ಹಾಗೂ ತುಮಕೂರ ರೇವಣಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು. ಉದ್ಯಮಿ ಉಪೇಂದ್ರ ಪೈ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಚಿಕ್ಕನಕೋಡ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ಜಗದೀಶ್ ನಾಯ್ಕ, ಉಪ್ಪೋಣಿ ಗ್ರಾಪಂ ಅಧ್ಯಕ್ಷರಾದ ಗಣೇಶ ತಿಪ್ಪಯ್ಯ ನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಭಕ್ತರು, ಗಣ್ಯರು, ಸಾಧು-ಸಂತ-ಸತ್ಪುರುಷರು ಭಾಗವಹಿಸಿದ್ದರು.