ಕೊಡಗಿನ ಪ್ರವಾಹ , ಅತಿವೃಷ್ಠಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ : ಎಚ್ ಡಿ ಕುಮಾರಸ್ವಾಮಿ

ಕೊಡಗು,ಆ 11      ಈ ಬಾರಿ  ಕೊಡಗಿನಲ್ಲಿ ಆದ ಅನಾಹುತವನ್ನು ಸರ್ಕಾರ ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ, ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ  ಸ್ಪಂದಿಸಿಲ್ಲ ಕೇವಲ ಅಧಿಕಾರಿಗಳಿಂದಲೇ ಎಲ್ಲಾ ಕೆಲಸವನ್ನು ಮಾಡಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಷ್ಟವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.  

ವಿರಾಜಪೇಟೆಯ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ದುರ್ಘಟನೆಯನ್ನು ನಮ್ಮ ಸರ್ಕಾರ ಸಮರ್ಥವಾಗಿ  ನಿಭಾಯಿಸಿತು. ಜನರಿಗೆ ಸೂಕ್ತ ಪರಿಹಾರ ನೀಡಿ ,ನಿರಾಶ್ರಿತರ ತುರ್ತ ಖರ್ಚೆಗೆ ಹಣ  ನೀಡಿದ್ದೆವು ಅಲ್ಲದೆ ಅವರ ಜೀವನೋಪಾಯಕ್ಕೂ ಅಗತ್ಯ ಸೌಲಭ್ಯ ಕಲ್ಪಿಸುವತ್ತ ಮೈತ್ರಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿತ್ತು ಎಂದು ಅವರು ತಿಳಿಸಿದರು. 

ಇನ್ನು ಕಳೆದ ವರ್ಷ ಮಡಿಕೇರಿ ಪ್ರವಾಹದ ವೇಳೆ ತೆರೆಯಲಾಗಿದ್ದ ಖಾತೆಯಲ್ಲಿಯೇ ಇನ್ನು 98 ಕೋಟಿ ರೂ ಬಾಕಿ ಉಳಿದಿದೆ.ಆ ಹಣವನ್ನಾದರೂ ಬಳಸಿಕೊಳ್ಳಲು ಜಿಲ್ಲಾಧಿಕಾರಿಗೆ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ಸರ್ಕಾರವೇ ಹಣವನ್ನು ಬಿಡುಗಡೆ ಮಾಡಿ ತುರ್ತ ಕಾರ್ಯಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಬೇಕು ಎಂದು ಅವರು ಮುಖ್ಯಮಂತ್ರಿಗೆ ಅವರು ಒತ್ತಾಯಿಸಿದರು. 

ಈ ಬಾರಿ  ಕೊಡಗಿನಲ್ಲಿ ಸಂಭವಿಸುತ್ತಿರುವ ಅನಾಹುತಗಳ ಬಗ್ಗೆ ರಾಜ್ಯ ಸರ್ಕಾರ ಹೆಚ್ಚು ಗಮನ ಹರಿಸಿಲ್ಲ, ಎಲ್ಲರಿಗೂ ಜವಾಬ್ದಾರಿ ವಹಿಸಿ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮವಹಿಸಬೇಕು.ಇಲ್ಲದಿದ್ದಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಕಷ್ಟ ಸಾಧ್ಯವಾಗುತ್ತದೆ ಹಾಗೂ ಅತಿವೃಷ್ಟಿ ಮತ್ತು ಪ್ರವಾಹದಲ್ಲಿ ಸಿಲುಕಿವವರ ರಕ್ಷಿಸುವುದು ಅಸಾಧ್ಯವೆಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.    

ವಿರಾಜಪೇಟೆಯ ಹೆಗ್ಗಳ್ಳಿಯಲ್ಲಿರುವ ಸಂತ್ರಸ್ಥರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು.ಈ ವೇಳೆ ಸಂತ್ರಸ್ಥರು ನಮ್ಮ ಕಷ್ಟಕ್ಕೆ ಸ್ಪಂದಿಸಿ, ಮಾಡಿರುವ ಸಾಲ  ತಿರಿಸುವುದಕ್ಕೆ ಸಮಯಾವಕಾಶ ನೀಡಲು ಸೂಚಿಸಿ, ಕಾಣೆಯಾದವರನ್ನ ಹುಡುಕಿಸಿ ಕೊಡಿ ಎಂದು ನಿರಾಶ್ರಿತರು ಮಾಜಿ ಮುಖ್ಯಮಂತ್ರಿ ಎಚ್.ಡಿ  ಕುಮಾರಸ್ವಾಮಿ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಇಡೀ ದಿನ ಕೊಡಗಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿರುವ ಕುಮಾರಸ್ವಾಮಿ, ಪ್ರವಾಹ ಪ್ರದೇಶಗಳಿಗೆ ಸಾಧ್ಯವಾದರೆ ಭೇಟಿ ನೀಡಿ ಬಳಿಕ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಲಿದ್ದಾರೆ.