ಆರ್ಥಿಕತೆಯ ಮೂಲಾಧಾರಗಳು ಸದೃಢ; ಆತಂಕಕ್ಕೆ ಕಾರಣವಿಲ್ಲ- ಪ್ರಧಾನಿ ಮೋದಿ

ನವದೆಹಲಿ, ಫೆ 6  :   ಭಾರತದ ಆರ್ಥಿಕತೆಯ ಮೂಲಾಧಾರಗಳು ಸದೃಢವಾಗಿವೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕತೆಯ ಸ್ಥಿತಿಯ ಬಗ್ಗೆ ನಿರಾಶೆಗೊಳ್ಳಲು ಇಲ್ಲವೇ ಆತಂಕ ಪಡಲು ಯಾವುದೇ ಕಾರಣವಿಲ್ಲ ಎಂದು ಗುರುವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಗುರುವಾರ ಸಂಸತ್ ನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಗೆ ಉತ್ತರಿಸಿದ ಮಾತನಾಡಿದ ಪ್ರಧಾನಿ,’ ಸದನದಲ್ಲಿ ಆರ್ಥಿಕತೆಯ ಸ್ಥಿತಿಗತಿ ಕುರಿತು ಚರ್ಚೆ ನಡೆದಿದೆ. ಆರ್ಥಿಕತೆಯ ಸ್ಥಿತಿ ಕುರಿತು ನಿರಾಶೆಗೊಳ್ಳಲು ಯಾವುದೇ ಕಾರಣವಿಲ್ಲ.’ ಎಂದು ಹೇಳಿದ್ದಾರೆ.  

ಆರ್ಥಿಕತೆಯ ಮೂಲಾಧಾರಗಳನ್ನು ಗಮನಿಸಿದರೆ, ದೇಶದ ಆರ್ಥಿಕತೆ ಸದೃಢವಾಗಿ ಉಳಿದಿದೆ. ಅಲ್ಲದೆ, ಮುಂದೆ ಸಾಗಲು ಮತ್ತು ಬೆಳವಣಿಗೆ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.  

ಆರ್ಥಿಕತೆಯ ಸ್ಥಿತಿಯ ಬಗ್ಗೆ ಪ್ರತಿಪಕ್ಷದ ಸದಸ್ಯರು ವ್ಯಕ್ತಪಡಿಸಿದ ಆತಂಕ ಕುರಿತು ಮಾತನಾಡಿದ ಪ್ರಧಾನಿ, ‘ನಿರಾಶೆ ಎಂದಿಗೂ ದೇಶಕ್ಕೆ ಒಳ್ಳೆಯದಲ್ಲ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಸಾಧ್ಯವಿಲ್ಲವೆಂದು ವಾದಿಸುವವರು ಸಹ ಭಾರತ, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಷಯದಲ್ಲಿ ನಾವು ಕನಿಷ್ಠ ಜನರ ಮನೋಸ್ಥಿತಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ. ಎಂದು ಹೇಳಿದ್ದಾರೆ.   

‘ಸರ್ಕಾರ ವಿಶಾಲವಾಗಿ ಯೋಚಿಸಬೇಕೆಂದು ಯುವಕರು ಬಯಸುತ್ತಾರೆ. ಅದಕ್ಕಾಗಿಯೇ ಸರ್ಕಾರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಹೊಂದಿದೆ.  ಜನರು ಅದು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ನಾವು ಸಾಧ್ಯವಿರುವ ಕೆಲಸಗಳನ್ನಷ್ಟೇ ಮಾಡಬೇಕೆ? ಅಸಾಧ್ಯವೆನಿಸಿದನ್ನು ಸಾಧಿಸಲು ಸಾಧ್ಯವಿಲ್ಲವೇ?’ಎಂದು ಪ್ರಧಾನಿ ಪ್ರಧಾನಿ ಪ್ರಶ್ನಿಸಿದ್ದಾರೆ.