ನೀತಿ ಸಂಹಿತೆಯ ಹರಿಕಾರ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎನ್ ಶೇಷನ್ ನಿಧನ

ಚೆನ್ನೈ, ನ 10 :      ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮಹತ್ತರದ ಸುಧಾರಣೆ ತಂದಿದ್ದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎನ್ ಶೇಷನ್ ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.    ಚುನಾವಣಾ ನೀತಿ ಸಂಹಿತೆಯ ಹರಿಕಾರ ಎಂದೇ ಖ್ಯಾತರಾಗಿದ್ದ ಶೇಷನ್ ಅವರಿಗೆ 86 ವರ್ಷ ವಯಸ್ಸಾಗಿತ್ತು.      ತಮಿಳುನಾಡಿನ 1955 ರ ವೃಂದದ ಐಎಎಸ್ ಅಧಿಕಾರಿ ಶೇಷನ್ 1990ರ ಡಿ.11 ರಿಂದ 1996   ರ ಡಿ.11ರವರೆಗೆ ಚುನಾವಣಾ ಆಯೋಗವನ್ನು ಮುನ್ನಡೆಸಿದ್ದರು.    ತಮ್ಮ ಅವಧಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಬದಲಿಸಿ ಆಯೋಗವನ್ನು ಪಾರದರ್ಶಕವಾಗಿಸಲು ಕ್ರಮ ಕೈಗೊಂಡಿದ್ದರು ಮತ್ತು ಮಾದರಿ ನೀತಿ ಸಂಹಿತೆಯನ್ನು ಪರಿಚಯಿಸಿದ್ದರು. ಇದು ರಾಜಕೀಯ ವಲಯದಲ್ಲಿ ಮಹತ್ವದ ಸಂಚಲನಕ್ಕೆ ಕಾರಣವಾಗಿತ್ತು.     ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 1932 ರಲ್ಲಿ ಜನಿಸಿದ ಅವರು 1955 ರಲ್ಲಿ ನಾಗರಿಕ ಆಡಳಿತ ಸೇವೆಗಳಿಗೆ ಸೇರಿದರು. ತಮ್ಮ ದಶಕಗಳ ವೃತ್ತಿಜೀವನದಲ್ಲಿ ತಮಿಳುನಾಡು ಮತ್ತು ಕೇಂದ್ರದಲ್ಲಿ ಹಲವಾರು ಇಲಾಖೆಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.     ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವ ಮೊದಲು, ಶೇಷನ್ ಅವರು ನಾಗರಿಕ ಆಡಳಿತ ಸೇವೆಗಳಲ್ಲಿ ಹಿರಿಯ ಸ್ಥಾನವೆನಿಸಿದ ಸಂಪುಟ ಕಾರ್ಯದರ್ಶಿಯಾಗಿದ್ದರು..    1997 ರಲ್ಲಿ ಶೇಷನ್ ಅವರು ಕೆ.ಆರ್.ನಾರಾಯಣನ್ ವಿರುದ್ಧ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.    ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೇಷನ್ ಅವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.