ನವದೆಹಲಿ, ಏ.18,ಐಪಿಎಲ್‍ನ ಮೊದಲ ಪಂದ್ಯದಲ್ಲಿ ಆಡಿದ್ದೇ ನನ್ನ ಜೀವನವನ್ನು ಬದಲಿಸಿತು ಎಂದು ನ್ಯೂಜಿಲೆಂಡ್ ತಂಡದ ಸ್ಟಾರ್ ಮಾಜಿ ಆಟಗಾರ ಬ್ರೆಂಡನ್ ಮೆಕಲಂ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಆವೃತ್ತಿಯಲ್ಲಿ ಮೆಕಲಂ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು.2008 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಆಡಿದ ಪಂದ್ಯದಲ್ಲಿ ಮೆಕಲಮ್ 73 ಎಸೆತಗಳಲ್ಲಿ 10 ಬೌಂಡರಿ ಮತ್ತು 13 ಸಿಕ್ಸರ್‌ಗಳೊಂದಿಗೆ ಅಜೇಯ 158 ರನ್ ಗಳಿಸಿದ್ದರು. ಇದು ಕೋಲ್ಕತ್ತಾ ಬೆಂಗಳೂರನ್ನು 140 ರನ್‌ಗಳಿಂದ ಸೋಲಿಸಲು ನೆರವಾಯಿತು."ನಾನು ಈ ಅವಕಾಶವನ್ನು ಪಡೆದಿರುವುದು ತುಂಬಾ ಅದೃಷ್ಟ. ನಿಮ್ಮ ವೃತ್ತಿಜೀವನದಲ್ಲಿ ಏರಿಳಿತಗಗಳು ಆಗುತ್ತವೆ. ಆದರೆ ಆ ರಾತ್ರಿ ನನ್ನ ಜೀವನ ಬದಲಿಸಿತು. ಆ ಮೂರು ಗಂಟೆಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದಿದ್ದಾರೆ. “ನಾನು ಸೌರಭ್ ಗಂಗೂಲಿಯೊಂದಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದೆ. ಮೊದಲ ಪಂದ್ಯದಲ್ಲಿ ಆಡಲು ನನಗೆ ಹೇಗೆ ಅವಕಾಶ ಸಿಕ್ಕಿತು. ಈ ಅವಕಾಶವನ್ನು ನಾನು ಹೇಗೆ ಪಡೆದುಕೊಂಡೆ. ಸತ್ಯವಾಗಿಯೂ ಈ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಆದರೆ, ಈ ಪಂದ್ಯ ನನ್ನ ಜೀವನವನ್ನೇ ಬದಲಿಸಿತು” ಎಂದು ಮೆಕಲಂ ತಿಳಿಸಿದ್ದಾರೆ.