ಜಿಲ್ಲೆಯ ಪ್ರಥಮ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ

ಹಾವೇರಿ: ಮೇ 26: ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  32 ವರ್ಷದ ಕ-639 ವ್ಯಕ್ತಿಯು ಗುಣಮುಖನಾದ ಕಾರಣ ಆಸ್ಪತ್ರೆಯಿಂದ  ಮಂಗಳವಾರ ಬಿಡುಗಡೆ ಮಾಡಲಾಯಿತು.

ಮೂಲತಃ ಸವಣೂರ ತಾಲೂಕಿನ ಕೃಷ್ಣ ನಗರದ ನಿವಾಸಿಯಾದ ಕ-639  ವ್ಯಕ್ತಿಯು ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದು ಮೇ 4 ರಂದು ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ  ಆಗಮಿಸಿದ್ದ 40 ವರ್ಷ ಸಹೋದರನಿಗೂ (ಕ-672 )  ಸೋಂಕು ದೃಢಪಟ್ಟಿತ್ತು. ಆದರೆ ಇವನಿಗಿಂತ ಮೊದಲೇ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದನು. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಈ ಪೈಕಿ ಎರಡು ಜನರು ಬಿಡುಗಡೆಗೊಂಡಿದ್ದಾರೆ. ನಾಲ್ಕು ಜನ ಸೋಂಕಿತರಿಗೆ ನಿಗಧಿತ ಆಸ್ಪತ್ರೆಯಲ್ಲಿ  ಚಿಕಿತ್ಸೆ ಮುಂದುವರಿಸಲಾಗಿದೆ. ಬಿಡುಗಡೆಗೊಂಡ ಇಬ್ಬರನ್ನು ಗೃಹಪ್ರತ್ಯೇಕತೆಯಲ್ಲಿರಿಸಲಾಗುತ್ತಿದೆ.

ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಕ-639 ವ್ಯಕ್ತಿ ಬಿಡುಗಡೆ ಸಂದರ್ಭದಲ್ಲಿ  ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಹಾಗೂ ಗುಲಾಬಿ ಹೂ ನೀಡಿ ಸಕರ್ಾರಿ ಅಂಬ್ಯುಲೆನ್ಸ್ ಮೂಲಕ ಮನೆಗೆ  ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ  ಮಾಧ್ಯಮದವರೊಂದಿಗೆ ವಿವರವನ್ನು ಹಂಚಿಕೊಂಡ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ ಅವರು, ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ ಕ-639  ವ್ಯಕ್ತಿಗೆ ಕೋವಿಡ್ ಸೋಂಕು ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈತನ ಅಂತಿಮ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ.  

         ಒಟ್ಟಾರೆ ಆರು ಸೋಂಕಿತರ ಪೈಕಿ ಎರಡು ಜನರು ಗುಣಮುಖಹೊಂದಿ ಬಿಡುಗಡೆಯಾಗಿದ್ದಾರೆ.  ಉಳಿದಂತೆ ನಾಲ್ಕು ಜನ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾವಹಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ ಪೂಜಾರ, ಡಾ.ವಿಶ್ವನಾಥ ಸಾಲಿಮಠ, ದಾದಿಯರು ಇತರೆ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.