ಹೋಳಿ ಹಬ್ಬವು ದುಷ್ಟತನದ ವಿರುದ್ಧ್ದ ಸದಾಚಾರದ ವಿಜಯದ ಸಂಕೇತ

The festival of Holi symbolizes the victory of good over evil

ವಿಜಯಪುರ 14: ಹೋಳಿ ಹಬ್ಬವು ಅತ್ಯಂತ ಸುಂದರ ಮತ್ತು ವಿಶಿಷ್ಟ ಭಾರತೀಯ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಸಂತಸವನ್ನು ವ್ಯಕ್ತಪಡಿಸುತ್ತಾರೆ. ಇದೊಂದು ಸೌಹಾರ್ಧತೆಯ ಸಂಕೇತವಾಗಿದೆ.  

ಹೋಳಿಕಾ ದಹನ್ ಅಥವಾ ಕಾಮದಹನವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಪ್ರಹ್ಲಾದನ ತಂದೆ ಹಿರಣ್ಯಕಶಿಪು ತನ್ನ ಶಕ್ತಿಗಾಗಿ ಎಲ್ಲರೂ ತನ್ನನ್ನು ಪೂಜಿಸಬೇಕೆಂದು ಬಯಸಿದಾಗ, ವಿಷ್ಣುವಿನ ಭಕ್ತನಾಗಿದ್ದ ಪ್ರಹ್ಲಾದನ ಮೇಲೆ ಕೋಪಗೊಂಡ ಹಿರಣ್ಯಕಶಿಪು ತನ್ನ ಸಹೋದರಿ ಹೋಳಿಕಾ ಇವಳೊಂದಿಗೆ ಪ್ರಹ್ಲಾದನನ್ನು ಕೊಲ್ಲಲು ಸಂಚು ಹೂಡುತ್ತಾನೆ. ಅನಂತರ ವಿಷ್ಣು ಪ್ರಹ್ಲಾದನನ್ನು ರಕ್ಷಿಸುತ್ತಾನೆ. ಹೋಳಿಕಾ ದಹನವಾಗುತ್ತಾಳೆ ಎಂಬ ಪ್ರತೀತಿಯಿದೆ. ಹೀಗಾಗಿ ಅಂದಿನಿಂದ ದುಷ್ಟತನದ ಮೇಲೆ ಸದಾಚಾರದ ವಿಜಯ ಮತ್ತು ಉತ್ತಮ ಶಕ್ತಿಗಳು, ಭಕ್ತಿ ಮತ್ತು ಶುದ್ಧ ಪ್ರೀತಿ, ಪ್ರಾಬಲ್ಯ ಮತ್ತು ಅನಗತ್ಯ ಶಕ್ತಿಯ ಮೇಲೆ ವಿಜಯವನ್ನು ಗೌರವಿಸಲು ಈ ಹೋಳಿಕಾ ದಹನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಹೋಳಿ ಹಬ್ಬವೆಂದರೆ ಕೇವಲ ಬಣ್ಣ ಎರಚಿಕೊಂಡು ಮೋಜು ಮಸ್ತಿ ಮಾಡುವದಷ್ಟೇ ಅಲ್ಲ. ಅದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಅರಿತು ನಾವೆಲ್ಲರೂ ದ್ವೇಷ ಮತ್ತು ದುರ್ಗುಣಗಳನ್ನು ತ್ಯಜಿಸಿ, ನಾವೆಲ್ಲರೂ ಒಂದು’ ಮತ್ತು ‘ವಸುದೈವ ಕುಟುಬಕಂ’ ಎನ್ನುವಂತೆ ಪ್ರೀತಿ, ಪ್ರೇಮ, ಸ್ನೇಹ ಮತ್ತು ಸೌಹಾರ್ಧತೆಯಿಂದ ಆಚರಿಸಬೇಕು. ಪರಿಸರ ಶುದ್ಧಿಕರಣ ಮತ್ತು ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರದಂತೆ ತಡೆಯುವ ನಿಟ್ಟಿನಲ್ಲಿ ಹೋಳಿ ಹಬ್ಬವನ್ನು ಆಚರಿಸಬೇಕು. ಅಂದಾಗ ಮಾತ್ರ ಹೋಳಿ ಆಚರಣೆಯು ಅರ್ಥಪೂರ್ಣವಾಗುತ್ತದೆ ಎಂದು ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.  

ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್‌.ಜಿ.ಓ. ಕಾಲನಿಯಲ್ಲಿ ಜರುಗಿದ ಕಾಮದಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.   

ಆಂಜನೇಯ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಅವರು ಮಾತನಾಡಿ, ಹೋಳಿ ಹಬ್ಬವನ್ನು ಆಡಂಭರವಿಲ್ಲದೇ ಸರಳ ರೀತಿಯಿಂದ ಆಚರಿಸುವ ಮನೋಭಾವ ನಮ್ಮದಾಗಬೇಕು. ನಾವೆಲ್ಲರೂ ಶಾಂತಿ, ಸಂಯಮ, ಸಹಕಾರ, ಸ್ನೇಹಪರತೆ, ಸಾಮರಸ್ಯತೆ ಮತ್ತು ಭಾವೈಕ್ಯತೆಯೊಂದಿಗೆ ಮತ್ತು ಸಮಾಜದಲ್ಲಿ ಶಾಂತಿ-ನೆಮ್ಮದಿಗೆ ಭಂಗ ಬರದಂತೆ ಆಚರಿಸುತ್ತಾ, ಎಲ್ಲರೊಂದಿಗೆ ಒಳ್ಳೆಯ ಸದ್ಭಾವನೆಯಿಂದ ಬಾಳಿ-ಬದುಕಿ ಈ ಹಬ್ಬವನ್ನು ಅರ್ಥಪೂರ್ಣವನ್ನಾಗಿ ಆಚರಿಸಬೇಕು ಎಂದರು.  

ಈ ಕಾಮದಹನ ಕಾರ್ಯಕ್ರಮದಲ್ಲಿ ಬಿ.ಆರ್‌.ಬಿರಾದಾರ ಮಾತನಾಡಿ, ಎನ್‌.ಬಿ.ಕೂಟನೂರ, ಬಾಬು ಕೋಲಕಾರ, ಎಸ್‌.ಜಿ.ನಿಂಗನಗೌಡ್ರ, ಬಲವಂತ ಬಳೂಲಗಿಡದ, ಶಿವಪ್ಪ ಸಾವಳಗಿ, ಪ್ರಭು ಬಳೂಲಗಿಡದ, ಗಂಗಾಧರ ಚಾಬೂಕಸವಾರ, ಅನೀಲ ಪಾಟೀಲ, ಶ್ರೀರಾಮ ದೇಶಪಾಂಡೆ, ರಮೇಶ ಕೋಷ್ಠಿ, ಶ್ರೀಧರ ತಾಟೆ, ಉಮಾಕಾಂತ ಪಂಚಾಳ, ಶಿವಾನಂದ ಬಿಜ್ಜರಗಿ, ಅಪ್ಪು ಪಾಟೀಲ, ಸುನೀಲ ಬಿರಾದಾರ, ಎ.ಎಸ್‌.ನಡಕಟ್ಟಿ, ಚೇತನ ದೇವನಾಯಕ, ಇನ್ನಿತರು ಸಹ ಉಪಸ್ಥಿತರಿದ್ದರು. ಕಾಮದಹನ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.