ಹೈದರಾಬಾದ್, ನ 7: ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೇಟ್ ಮಹಿಳಾ ತಹಶೀಲ್ದಾರ್ ವಿಜಯಾರೆಡ್ಡಿ ಅವರ ಕಚೇರಿಗೆ ಹಾಡುಹಗಲೇ ನುಗ್ಗಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಹತ್ಯೆಮಾಡಿದ್ದ, ಕುಕೃತ್ಯ ವೇಳೆ ತಾನು ಗಾಯಗೊಂಡಿದ್ದ ಆರೋಪಿ ಕುರ್ರಾ ಸುರೇಶ್ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಘಟನೆಯ ವೇಳೆ ಶೇ. 65ರಷ್ಟು ಗಾಯಗೊಂಡಿದ್ದ ಆತನನ್ನು ಉಸ್ಮಾನಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ತಹಶೀಲ್ದಾರ್ ಅವರನ್ನು ರಕ್ಷಿಸಲು ಮುಂದಾಗಿ ಶೇ 80ರಷ್ಟು ಗಾಯಗೊಂಡಿದ್ದ ವಾಹನ ಚಾಲಕ ಗುರುನಾಥಂ ಅವರೂ ಸಹ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದರು. ಘಟನೆಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಅಡೆಂಡರ್ ಚಂದ್ರಯ್ಯ ಎಂಬುವರು ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.