ಲೋಕದರ್ಶನ ವರದಿ
ಬೈಲಹೊಂಗಲ 18: ತಾಲೂಕಿನ ದೊಡವಾಡ ಗ್ರಾಮದಿಂದ ಕರಿಕಟ್ಟಿಗೆ ತೆರಳುವ ರಸ್ತೆ ಬಾನಿಯವರ ಬಾವಿ ಬಳಿ ಕುಸಿದು ಬಿದ್ದಿದ್ದು ಅಪಘಾತಕ್ಕೆ ಕೈ ಬೀಸಿ ಕರೆಯುವಂತಾಗಿದೆ.
ತಾಲೂಕಿನ ಸುತಗಟ್ಟಿ ಡೊಂಕಾಳ ಹಳ್ಳಕ್ಕೆ ಅಡ್ಡಲಾಗಿರುವ ರಸ್ತೆಗೆ ಕೇವಲ ಎರಡು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ಕಿರು ಸೇತುವೆಯ ಒಂದು ಭಾಗ ಮಂಗಳವಾರ ಸಂಜೆ ಕುಸಿದು ಬಿದ್ದಿದ್ದು ರಸ್ತೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ರಸ್ತೆ ಪಕ್ಕದ ಮಣ್ಣಿನ ದಿಬ್ಬದ ಚಿಕ್ಕ ದಾರಿಯಲ್ಲೇ ಚಕ್ಕಡಿ ಹಾಗೂ ಹಗುರ ಗಾತ್ರದ ವಾಹನಗಳು ಸಂಚರಿಸುತ್ತಿವೆ. ಕಿರು ಸೇತುವೆಯ ಉಳಿದರ್ಧ ಕೂಡ ಯಾವ ಹೊತ್ತಿನಲ್ಲಾದರೂ ಕುಸಿಯುವ ಸ್ಥಿತಿಯಲ್ಲಿದ್ದು ಆಪಾಯವನ್ನು ಲೆಕ್ಕಿಸದೆ ರೈತರು, ವಾಹನ ಸವಾರರು ರಸ್ತೆ ದಾಟುತ್ತಿದ್ದಾರೆ. ಅತೀ ಹೆಚ್ಚು ವೇಗದಿಂದ ಚಲಾಯಿಸಿದರೆ, ರಾತ್ರಿ ವೇಳೆ ಮೈಮರೆತು ವಾಹನ ಚಲಾಯಿಸಿದರೆ ಅಪಘಾತಕ್ಕೀಡಾಗಿ ಮಸಣಕ್ಕೆ ಸೇರುವದು ನಿಶ್ವಿತ.
ಕಳಪೆ ಕಾಮಗಾರಿ:
ಕಳೆದ ಜುಲೈ ಮತ್ತು ಆಗಷ್ಟ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಸವದತ್ತಿ- ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಇನಾಮಹೊಂಗಲ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದು ಆ ಮಾರ್ಗದಲ್ಲಿ ನಿತ್ಯ ಸಂಚರಿಸುತ್ತಿದ್ದ ನೂರಾರು ವಾಹನಗಳಿಗೆ ಧಾರವಾಡಕ್ಕೆ ತಲುಪಲು ಪರ್ಯಾಯ ಮಾರ್ಗವಾಗಿ ಕರೀಕಟ್ಟಿ-ದೊಡವಾಡ-ಉಪ್ಪಿನ ಬೆಟಗೇರಿ ರಸ್ತೆ ಬಳಕೆಯಾಯಿತು. ಮಾರ್ಗದ ಕಿರು ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದ್ದರಿಂದ ಈ ಕುಸಿತಕ್ಕೆ ಕಾರಣ ಎಂದು ಇಲ್ಲಿನ ರೈತರು ಆರೋಪಿಸುತ್ತಿದ್ದಾರೆ.
ಕಳೆದ ವರ್ಷವಷ್ಟೇ ಹೊಸದಾಗಿ ನಿರ್ಮಾಣಗೊಂಡಿದ್ದ ಕರೀಕಟ್ಟಿ ದೊಡವಾಡ ರಸ್ತೆ ಮೇಲೆ ಧಾರವಾಡಕ್ಕೆ ಸಂಚರಿಸುವ ಕೆಸ್ಆರ್ಟಿಸಿ ಬಸ್ಸಗಳು ಸೇರಿದಂತೆ ಬಾರಿ ಗಾತ್ರದ ವಾಹನಗಳು ಎರಡು ತಿಂಗಳಿಂದ ನಿರಂತರ ಸಂಚರಿಸಿದ್ದರಿಂದ ಒತ್ತಡ ತಾಳಲಾರದೆ ಕಿರು ಸೇತುವೆಯ ತಳದ ಪೈಪುಗಳು ಒಡೆದು ರಸ್ತೆ ಮೇಲಿನ ಡಾಂಬರು ಮತ್ತು ಮಣ್ಣು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆಗಾಗ ಸುರಿಯುತ್ತಿರುವ ಮಳೆಯಿಂದ ಹಳ್ಳದಿಂದ ಹರಿದು ಬರುತ್ತಿರುವ ನೀರು ರಭಸಕ್ಕೆ ಸೇತುವೆಯ ಉಳಿದ ಭಾಗ ಕೂಡ ಕುಸಿಯುವ ಹಂತದಲ್ಲಿದ್ದು ಭಾರಿ ಗಾತ್ರದ ವಾಹನ ಸಂಚಾರದಿಂದ ರಸ್ತೆ ಹಾಳಾಗಬಹುದು ಅಂದುಕೊಂಡಿದ್ದ ಈ ವ್ಯಾಪ್ತಿಯ ರೈತರ ಶಂಕೆ ನಿಜವಾಗಿದೆ.
ದುರಸ್ತಿ ಯಾವಾಗ?
ದೊಡವಾಡ, ಕರೀಕಟ್ಟಿ ಹಾಗೂ ಸುತಗಟ್ಟಿ ಗ್ರಾಮಗಳ ಸಾವಿರಾರು ರೈತರು ತಮ್ಮ ನಿತ್ಯದ ಕೃಷಿ ಚಟುವಟಿಕೆಗಳಿಗೆ ಇದೇ ರಸ್ತೆ ಆಧಾರವಾಗಿದ್ದು ಉತ್ತಮ ಗುಣ ಮಟ್ಟದ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಶೀಘ್ರ ದುರಸ್ತಿ ಕಾಮಗಾರಿ ಆರಂಭಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ ಕಿತ್ತೂರು ಸೇರಿದಂತೆ ಇತರೆಡೆ ಭಾಗಗಳಿಂದ ಯಲ್ಲಮ್ಮನ ಗುಡ್ಡ ಯಾತ್ರೆಗೆ ಸಾಗಲು ಇದೇ ಮಾರ್ಗ ಬಳಸಿಕೊಳ್ಳುತ್ತಿದ್ದಾರೆ. ಆದರೆ ಭಾರಿ ಗಾತ್ರದ ವಾಹನ ಸಂಚಾರಕ್ಕೆ ಈ ರಸ್ತೆ ಯೋಗ್ಯವಾಗಿಲ್ಲ ಆದ್ದರಿಂದ ಅಂತಹ ವಾಹನಗಳ ಸಂಚಾರವನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಸಾವಿರಾರು ರೈತರ ಒತ್ತಾಯವಾಗಿದೆ.