ಮೌಂಟ್‌ಮೌಂಗಾನುಯಿ, ಫೆ 10 : ಭಾರತ ತಂಡದ ನಾಯಕ ಹಾಗೂ ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮುರಿಯುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಹಿರಿಯ ವೇಗಿ ಟಿಮ್ ಸೌಥಿಗೆ ಹೆಚ್ಚು ಬಾರಿ ಔಟ್ ಆಗಿರುವುದು ವಿಪರ್ಯಾಸ. ಈ ಬಗ್ಗೆ ಸ್ವತಃ ಸೌಥಿ ಮಾತನಾಡಿ, ವಿರಾಟ್ ಕೊಹ್ಲಿ ಕ್ಲಾಸ್ ಆಟಗಾರರಾಗಿದ್ದು, ಅವರಿಗೆ ಯಾವುದೇ ದೌರ್ಬಲ್ಯ ಇಲ್ಲ ಎಂದಿದ್ದಾರೆ.
ಆಕ್ಲೆಂಡ್‌ನಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 274 ರನ್ ಗುರಿ ಹಿಂಬಾಲಿಸಿದ್ದ ವೇಳೆ ಭಾರತ ತಂಡದ ನಾಯಕ 15 ರನ್ ಗಳಿಸಿ ಆಡುತ್ತಿರವಾಗ ಟಿಮ್ ಸೌಥಿ ಕ್ಲೀನ್ ಬೌಲ್ಡ್ ಮಾಡಿದ್ದರು. ಎಲ್ಲ ಮಾದರಿಯಲ್ಲೂ ಸೌಥಿ ಅವರು ವಿರಾಟ್ ಕೊಹ್ಲಿ ಅವರನ್ನು ಹೆಚ್ಚು ಬಾರಿ ಔಟ್ ಮಾಡಿರುವ ವಿಶ್ವದ ಬೌಲರ್‌ಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಕೊಹ್ಲಿಯನ್ನು 9ನೇ ಬಾರಿ ಔಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ಹೆಚ್ಚು ಬಾರಿ ಔಟ್ ಮಾಡಿರುವ ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಅಂಡರ್ಸನ್ ಹಾಗೂ ಗ್ರೇಮ್ ಸ್ವಾನ್ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರೂ ಎಂಟು ಬಾರಿ ಕೊಹ್ಲಿ ಅವರನ್ನು ಔಟ್ ಮಾಡಿದ್ದಾರೆ. ಮಾರ್ನೆ ಮಾರ್ಕೆಲ್, ನಥಾನ್ ಲಿಯಾನ್, ಆ್ಯಡಂ ಝಂಪಾ ಹಾಗೂ ರವಿ ರಾಂಪಾಲ್ ಅವರು ಭಾರತ ತಂಡದ ನಾಯಕನನ್ನು ಏಳು ಬಾರಿ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟಿಮ್ ಸೌಥಿ," ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿಜಕ್ಕೂ ಕ್ಲಾಸ್ ಆಟಗಾರರಾಗಿದ್ದು, ಅವರಿಗೆ ಯಾವುದೇ ದೌರ್ಬಲ್ಯಗಳಿಲ್ಲ. ಹೊಸ ಚೆಂಡಿನಲ್ಲಿ ಮಾತ್ರ ಅವರನ್ನು ಔಟ್ ಮಾಡಬಹುದಾದ ಅವಕಾಶಗಳಿವೆ. ಅದು ಬಿಟ್ಟು ಬೇರೆ ಸಮಯದಲ್ಲಿ ಅವರನ್ನು ಔಟ್ ಮಾಡುವುದು ಕಷ್ಟದ ಕೆಲಸ,'' ಎಂದು ಹೇಳಿದ್ದಾರೆ.
"ವಿಕೆಟ್ ಪಡೆಯುವುದು ನಿನ್ನ ಕೆಲಸ ಎಂಬುದನ್ನು ನಾನು ಊಹೆ ಮಾಡಿಕೊಳ್ಳುತ್ತೇನೆ. ಎದುರಾಳಿ ಪಾಳಯದಲ್ಲಿ ಕೀ ಆಟಗಾರನ ವಿಕೆಟ್ ಪಡೆಯುವುದು ಹೆಚ್ಚು ಖುಷಿ ನೀಡುತ್ತದೆ. ವಿರಾಟ್ ಒಬ್ಬ ಅದ್ಭುತ ಆಟಗಾರ ಹಾಗೂ ಅದರಲ್ಲೂ ವಿಶೇಷವಾಗಿ ಗುರಿ ಹಿಂಬಾಲಿಸುವಾಗ ಅತ್ಯುತ್ತಮ ಲಯದ ಆಟಗಾರ,'' ಎಂದು ಕೊಂಡಾಡಿದರು.
ಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲು ಅನುಭವಿಸಿದ ಹೊರತಾಗಿಯೂ ನಾವು ಏಕದಿನ ಸರಣಿಯನ್ನು ವಶಪಡಿಸಿಕೊಂಡ ಬಗ್ಗೆ ಸೌಥಿ ಖುಷಿ ಪಟ್ಟರು.
"ಭಾರತದ ವಿರುದ್ಧ ಆಡುವುದು ಅದ್ಭುತ. ಟಿ20 ಸರಣಿಯಲ್ಲಿ ನಮ್ಮ ಯೋಜನೆ ಫಲಿಸಲಿಲ್ಲ. ಆದರೆ, ಏಕದಿನ ಸರಣಿಯಲ್ಲಿ ಫಲಿಸಿತು. ಹಲವು ಹಿರಿಯ ಆಟಗಾರರ ಅನುಪಸ್ಥಿಯಲ್ಲೂ ನಾವು ಅತ್ಯುತ್ತಮ ಪ್ರದರ್ಶನ ತೋರಿದ್ದೇವೆ,'' ಎಂದು ಸೌಥಿ ಹೇಳಿದರು.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಾಳೆ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.