ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು

ಮನುಷ್ಯನ ಉಗಮ ಆದಾಗಿನಿಂದಲೂ ಸಂಪಾದನೆ ಎನ್ನುವುದನ್ನು ರೂಢಿಸಿಕೊಂಡಿದ್ದಾನೆ. ಮೊದಲು ಆಹಾರ ಸಂಪಾದಿಸಿ ಕೊಳ್ಳಬೇಕು, ಒಂದಷ್ಟು ಆಸ್ತಿ ಸಂಪಾದಿಸಬೇಕು, ತನ್ನೊಟ್ಟಿಗೆ ಬದುಕಲು ಜನರನ್ನು ಸಂಪಾದಿಸಿ ಅದೊಂದು ಊರನ್ನು ಕಟ್ಟಿಕೊಳ್ಳಬೇಕು. ಹೀಗೆ ಒಂದಾದ ಮೇಲೆ ಒಂದರಂತೆ ಆಸೆಗಳು ಶುರುವಾಗಿ ಈಗ ವಿದ್ಯೆ ಮತ್ತು ಹಣ ಸಂಪಾದನೆಗೆ ಪ್ರಾಮುಖ್ಯತೆ ಪಡೆದಿದೆ. 

ಮಕ್ಕಳಿಗೆ ವಿದ್ಯೆಯನ್ನು ಕಲಿಸಿದರೆ ಅವರು ತಮ್ಮ ಕಾಲ ಮೇಲೆ ನಿಂತು ಹಣ ಸಂಪಾದಿಸುತ್ತಾರೆ. ಅದರಿಂದ ಇಡೀ ಜೀವನ ಸುಗಮವಾಗಿ ಸಾಗಿ ಬಿಡುತ್ತದೆ ಎನ್ನುವದು ಎಲ್ಲರ ಅಂಬೋಣ. ಇದನ್ನು ಅಲ್ಲಗಳೆಯುವಂತಿಲ್ಲ. ಆದರೆ ವಿದ್ಯೆ ಮತ್ತು ಹಣದ ಜೊತೆ ಮನಸ್ಸು ಶಾಂತಿಯಾಗಿರುವುದು, ಜೀವನ ತೃಪ್ತಿದಾಯಕವಾಗಿರುವುದು ಕೂಡ ಅಷ್ಟೆ ಮುಖ್ಯ ಎನ್ನುವುದನ್ನು ಮರೆತಿದ್ದೇವೆ. ವಿಜ್ಞಾನ ತಂತ್ರಜ್ಞಾನದ ಆಸರೆಯಲ್ಲಿ ಅಭಿವೃದ್ಧಿಯ ಉತ್ತುಂಗಕ್ಕೆ ಏರಿದ್ದೇವೆ.  ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಯಂತ್ರಗಳನ್ನೇ ಹೆಚ್ಚಿಗೆ ಅರ್ಥ ಮಾಡಿಕೊಳ್ಳುತ್ತಿದ್ದೇವೆ.  ಅಪ್ಪ ಅಮ್ಮ, ಅಣ್ಣ ತಂಗಿ, ಬಂಧು ಬಳಗ ಇವೆಲ್ಲ ಇಲ್ಲದಿದ್ದರೂ ಆದೀತು. ಆದರೆ ಆಧುನಿಕ ಉಪಕರಣಗಳು ಇಲ್ಲದಿದ್ದರೆ ನಮ್ಮಿಂದ ಬದುಕಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಬದಲಾಗಿ ಹೋಗಿದ್ದೇವೆ. ಆಧುನಿಕ ಸೌಲತ್ತುಗಳು ಬೇಕು ಎಂದರೆ ಹಣ ಬೇಕು. ಹಣಕ್ಕಾಗಿ ವಿದ್ಯೆ ಕಲಿಯಬೇಕು ಇಷ್ಟೇ ಈಗ ಎಲ್ಲರಲ್ಲಿ ಇರುವ ಯೋಚನೆ.

ಆದರೆ ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಮನಸ್ಸು ಅದೆಷ್ಟು ಸಂಕುಚಿತವಾಗುತ್ತಿದೆ ಎಂದರೆ ಯಾವುದೊಂದೂ ಸರಿ ಎನ್ನಿಸುವುದೇ ಇಲ್ಲ. ಇನ್ನೂ ಏನೋ ಬೇಕು ಎನ್ನುವ ಧೋರಣೆಯೇ ನಮ್ಮಲ್ಲಿ ಇರುತ್ತದೆ. ಹಾಗಾಗಿ ಎದುರಿಗೆ ಯಾವುದು ಇದೆಯೋ ಅದು ನಮಗೆ ಸರಿಯಾಗಿದೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಸದಾ ಅಸಹನೆ, ಕೀಳರಿಮೆ, ಖಿನ್ನತೆಯೇ ಹೆಚ್ಚು. ಅವರ ಮನೆಯಲ್ಲಿ ಪ್ರಿಡ್ಜ್ ಇದೆ. ನಮ್ಮನೆಲಿ ಇಲ್ಲ. ಹಾಗಾಗಿ ಬಂದವರೆದುರು ಮುಜುಗರ. ಒಂದು ಪ್ರಿಡ್ಜ್ ತಂದಾಯಿತು ಅಂದರೆ ಮತ್ತೊಂದು ಮನೆಯಲ್ಲಿ ಡಬಲ್ ಡೋರ್ ಇರುವಂಥ ಪ್ರಿಡ್ಜ್ ಇದೆ ಅಂತಾದರೆ ಅಂಥದ್ದೆ ನಮ್ಮನೆಯಲ್ಲೂ ತರಬೇಕಿತ್ತು. ಹೀಗೆ ಸಣ್ಣ ಸಣ್ಣ ವಿಷಯಗಳಿಗೆ ದುಃಖ, ವಿಷಾಧ, ಅಸಹನೆ. ಇದ್ದಿದ್ದರಲ್ಲಿ ತೃಪ್ತಿ ಪಡುವ ಯೋಚನೆಯೇ ಇಲ್ಲವಾಗಿದೆ. 

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಆ ಹಳ್ಳಿಗೆ ಇರುವುದು ಒಂದೇ ಬಸ್ಸು. ಅದು ಮದ್ಯಾಹ್ನ ಹನ್ನೆರಡುವರೆಗೆ ಆ ಹಳ್ಳಿ ತಲುಪಿ ತಿರುಗಿ ಬರುತಿತ್ತು. ಅದು ಕೊನೆಯ ನಿಲ್ದಾಣ ಆಗಿರುವದರಿಂದ ಸುತ್ತ ಹಳ್ಳಿಯವರು ಅಲ್ಲಿಯೇ ಇಳಿದುಕೊಳ್ಳುತ್ತಿದ್ದರು. ಒಬ್ಬಬ್ಬರ ಹಳ್ಳಿಯ ದೂರ ಬೇರೆ ಬೇರೆ. ಕೆಲವರಿಗೆ ಎರಡು ಕಿಲೋಮೀಟರ್ ದೂರ ನಡೆದರೆ ತಮ್ಮ ಹಳ್ಳಿ ಸಿಕ್ಕರೆ ಮತ್ತೊಬ್ಬರಿಗೆ ಎಂಟು ಕಿಲೋಮೀಟರ್ ದೂರ ನಡೆಯಬೇಕು. ಇನ್ನೊಬ್ಬನಿಗೆ ಬೇರೆ ದೂರ. ಹಾಗಿರುವಾಗ ಅಲ್ಲಿ ಯಾರ ಮನೆಗೆ ತಲುಪಲು ಹತ್ತಿರ ಇದೆಯೋ ಅಂಥವರು ಆತ್ಮೀಯತೆಯಿಂದ ತಮ್ಮ ಮನೆಗೆ ಬಂದು ಊಟ ಮಾಡಿ ದಣಿವಾರಿಸಿಕೊಂಡು ನಿಮ್ಮೂರಿಗೆ ಹೋಗಿ ಎಂದು ಹೇಳುತ್ತಿದ್ದರು. ಅಲ್ಲಿ ಯಾವ ನೆಂಟಸ್ತಿಕೆ, ಸಂಬಂಧ ಇರಬೇಕು ಎಂದಿರಲಿಲ್ಲ. ಆ ಮನೆಯ ಊಟ ಉಂಡು ಹರಸಿ, ನಾಲ್ಕು ಮಾತಾಡಿ ತಮ್ಮ ತಮ್ಮ ಮನೆಗೆ ಹೋಗುತ್ತಿದ್ದರು. ಊಟ ಹಾಕಿದವರಿಗೆ ತನ್ನಿಂದ ಇವತ್ತು ಇಷ್ಟು ದಾನವಾಯಿತೆಂಬ ನೆಮ್ಮದಿ, ತೃಪ್ತಿ. ಉಂಡವನಿಗೆ ಹಸಿವು ನೀಗಿಸಿದ ಪುಣ್ಯಾತ್ಮ ಎನ್ನುವ ಖುಷಿ. ಇಷ್ಟೆ ಅಲ್ಲಿ ಇದ್ದಿರುತಿತ್ತು.

ಈಗ ಕಾಲ ಬದಲಾಗಿದೆ. ಮನೆಗೆ ನಮ್ಮದೇ ಹತ್ತಿರದವರು ಬರುತ್ತಾರೆ ಎಂದರೆ ಅದೆಷ್ಟೋ ಮನೆಯಲ್ಲಿ ಸಿಡಿಮಿಡಿಗಳು ಏಳುತ್ತವೆ. ಎರಡು ದಿನ ಉಳಿದು ಬಿಟ್ಟರೆ ತಮ್ಮ ಮನೆಯನ್ನು ಖಾಲಿ ಮಾಡಿ ಹೋಗುವರೋ ಎನ್ನುವಂತೆ ನೋಡುತ್ತಾರೆ. ಮನುಷ್ಯ ಎಷ್ಟು ಸಂಕುಚಿತವಾಗಿದ್ದಾನೆ ಎಂದರೆ ಹೆಣ್ಣು ಮಗಳು ತವರಿಗೆ ಹಬ್ಬಕ್ಕೆಂದು ಬಂದವಳು ನಾಲ್ಕು ದಿನ ಉಳಿದರೆ ಅಕ್ಕ ಪಕ್ಕದವರಿಂದಲೂ ಯಾವಾಗ ಹೋಗ್ತಾಳಂತೆ ನಿಮ್ಮ ಹುಡುಗಿ ಅಂತ ಕೇಳೋಕೆ ಶುರು ಮಾಡುತ್ತಾರೆ. ಮತ್ತೆರಡು ದಿನ ಉಳಿದರೆ ಊಹಾಪೂಹವಾಗಿ ಗಂಡನನ್ನು ಬಿಟ್ಟು ಬಂದಿದ್ದಾಳೆ ಎನ್ನುವ ಸುದ್ದಿ ಹರಡಿದರೂ ಆಶ್ಚರ್ಯವಿಲ್ಲ. 

ಮನದಲ್ಲಿ ವಿಶಾಲತೆ ಎನ್ನುವದು ಅಳಿಸಿ ಹೋಗಿದೆ. ಏನಿದ್ದರು ತಾನು ತನ್ನದು ಅಷ್ಟಕ್ಕೆ ಸೀಮಿತ. ಒಂದು ರಸ್ತೆ ಇದೆ ಎಂದದಾದರೆ ಅದರಲ್ಲಿಯ ಅಗಲ ಎಷ್ಟಿದೆಯೋ ಅಷ್ಟು ತನ್ನ ಕಾರು ಓಡಿಸಲೇ ಬೇಕು ಎನ್ನುವ ಧೋರಣೆ ಒಂದು ಕಡೆಯಾದರೆ, ಇರುವ ಊಟದಲ್ಲಿ ಮತ್ತೊಬ್ಬನಿಗೆ ಪಾಲು ಕೊಡಲಾರೆ ಎನ್ನುವದು ಮತ್ತೊಂದು ಕಡೆ. ಅಂದರೆ ಎಲ್ಲ ಕಡೆಯಿಂದಲೂ ತನಗೆ ಮಾತ್ರ ಸಿಗಬೇಕು. ಬರೀ ಸ್ವಾರ್ಥದ ಬದುಕು. 

ಎಲ್ಲರೂ ಹೀಗೆ ಇದ್ದಾರೆ ಎಂದಲ್ಲ. ಆದರೆ ಈಗಿನವರೆಲ್ಲ ಹೆಚ್ಚಿನವರಾಗಿ ಹೀಗೆ ಇರುವುದು. ಅದಕ್ಕಾಗಿ ಕೆಲವೊಮ್ಮೆ ನಮ್ಮನ್ನು ನಾವು ಎಲ್ಲಿ ನಿಂತಿದ್ದೇವೆ ಎಂದು ನೋಡಿಕೊಳ್ಳಬೇಕಿದೆ. ಒಂದು ನಗುವನ್ನು ಚೆಲ್ಲಿದಾಗ ಪ್ರತಿಯಾಗಿ ನಗುವನ್ನು ಸೂಸಲು ಈಗ ಹಣ ಕೊಡಬೇಕು ಎನ್ನುವಂತಾಗಿದೆ. ತನಗೇನು ಕಮ್ಮಿ. ತಾನು ಯಾರಿಗೇಕೆ ಶರಣು ಹೊಡಯಬೇಕು? ತನ್ನಿಂದ ಎಲ್ಲವೂ ಸಾಧ್ಯ ಇರುವಾಗ ಬೇರೆಯವರ ಅವಶ್ಯಕತೆ ಏನಿದೆ? ಇಂಥ ಯೋಚನೆಗಳು ಜೇಬಿನಲ್ಲಿ ಹಣ ಇರುವವ ಒಂದಲ್ಲ ಒಂದು ಬಾರಿಯಾದರೂ ಅಂದುಕೊಳ್ಳದೇ ಇರಲಾರ. ಎಲ್ಲವೂ ಪರಮಾತ್ಮನದು ತನ್ನದೇನಿಲ್ಲ ಎಂದು ಹೇಳುವವರು ಕೋಟಿಗೆ ಒಬ್ಬ ಸಿಕ್ಕರೆ ಆತ ದೇವತಾ ಮನುಷ್ಯನೇ ಸರಿ.

ಮೊದಲು ಜಗತ್ತು ಸಣ್ಣದಿತ್ತು, ವಿಶಾಲ ಮನಸ್ಸಿತ್ತು. ಈಗ ಜಗತ್ತು ವಿಶಾಲವಾಗಿದೆ ದೃಷ್ಟಿಕೋನ ಸಂಕುಚಿತವಾಗಿದೆ. ಮನೆಗಳು ದೊಡ್ಡ ದೊಡ್ಡ ಬಂಗಲೆಗಳಾಗಿವೆ. ಕುಟುಂಬ, ಬಂಧು ಬಳಗ ಚಿಕ್ಕದಾಗಿದೆ. ಬೇಕಾದಷ್ಟು ವಿದ್ಯೆ ಕಲಿಯುತ್ತೇವೆ, ಸಮಯಕ್ಕೆ ಬೇಕಾದ ಜ್ಞಾನವಿಲ್ಲವಾಗಿದೆ. ಅಂದು ಹಣವಿರಲಿಲ್ಲ. ಹಸಿದವನಿಗೆ ಯಾವುದೇ ಮನೆಯಲ್ಲಾದರೂ ಊಟ ಸಿಗುತಿತ್ತು.  ತಿಂದುಂಡು ಹೆಚ್ಚಾಗುವಷ್ಟು ಹಣ ಗಳಿಸಿದ್ದೇವೆ. ಒಂದು ತುತ್ತು ಊಟ ಹಾಕಿದರೆ ಖಾಲಿಯಾಗುತ್ತದೆ ಎನ್ನುವಂತೆ ನೋಡುತ್ತೇವೆ. ಇದರಿಂದ ತಿಳಿಯುವುದು ಇಷ್ಟೆ. ಬದಲಾಗಿರುವುದು ಜಗತ್ತಲ್ಲ. ನಾವು. 

ನಮ್ಮ ಮನಸ್ಥಿತಿ. ನಮ್ಮ ಕೈಲಿರುವ ಕಾಂಚಾಣ ನಮ್ಮನ್ನು ಸಂಕುಚಿತಗೊಳಿಸುತ್ತಿದೆ. ಹಣವೊಂದಿದ್ದರೆ ಎಲ್ಲವನ್ನು ಗೆದ್ದು ಬಿಡಬಹುದು ಎನ್ನುವ ಹುಚ್ಚು. ನಿಜವಾಗಿ ಬಹುತೇಕ ದೊಡ್ಡ ದೊಡ್ಡ ಉದ್ಯಮಿಗಳೆಲ್ಲ ಬಡತನದಿಂದ ಬಂದವರು. ಹಾಗೆಯೇ ಅತೀಯಾದ ಶ್ರೀಮಂತಿಕೆ ಇದ್ದುಕೊಂಡು ವಿದ್ಯೆ ಹತ್ತದೆ ಮೂಲೆಗುಂಪಾದವರೂ ಇದ್ದಾರೆ. ನಮ್ಮ ಜೀವನದಲ್ಲಿ ಕಾಂಚಾಣವೇ ಆಟ ಆಡುವುದು. ಕುರುಡು ಕಾಂಚಾನದ ಮುಂದೆ ಮನುಷ್ಯನ ಯಾವ ಆಟವೂ ಇಲ್ಲ. ಕಾಂಚಾಣವಿದ್ದರೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡವನು ಮಾತ್ರ ಇಲ್ಲಿ ಗೆಲುವು ಸಾಧಿಸುತ್ತಾನೆ.