ನವದೆಹಲಿ, ಜೂನ್ 26: ವಿಶ್ವಕಪ್ (50 ಓವರ್) ನಂತಹ ಮಹತ್ವದ ಟೂರ್ನಿಗಳಲ್ಲಿ ಒಂದು ವೇಳೆ ಪಂದ್ಯ ಟೈ ಆದರೆ ಉಭಯ ತಂಡಗಳಿಗೂ ಜಂಟಿಯಾಗಿ ಪ್ರಶಸ್ತಿ ನೀಡಬೇಕೇ ವಿನಃ ಏಕದಿನ ಮಾದರಿಯಲ್ಲಿ ಸೂಪರ್ ಓವರ್ ಅಗತ್ಯವಿಲ್ಲ ಎಂದು ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟ್ಸ್ ಮನ್ ರಾಸ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ.ಕಳೆದ ವರ್ಷ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವ ಕಪ್ ಫೈನಲ್ ಪಂದ್ಯ ನಿಗದಿತ ಅವಧಿ ಮತ್ತು ಸೂಪರ್ ಓವರ್ ಎರಡರಲ್ಲೂ ಟೈ ಆಗಿತ್ತು. ಈ ವೇಳೆ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ ಆಧಾರದ ಮೇರೆಗೆ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಹೀಗಾಗಿ ಐಸಿಸಿ ನಿಯಮಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.ವಿಜೇತರು ನಿರ್ಧಾರವಾಗುವರೆಗೂ ಸೆಮಿಫೈನಲ್ಸ್ ಮತ್ತು ಫೈನಲ್ ನಲ್ಲಿ ಸೂಪರ್ ಓವರ್ ಬಳಕೆಗೆ ಅನುವು ಮಾಡಿಕೊಡುವ ನಿಯಮವನ್ನು ತೆಗೆದುಹಾಕಲು ಐಸಿಸಿ ಚಿಂತಿಸಿದೆ. ಆದರೆ ಟೇಲರ್, ಒಂದು ವೇಳೆ ಪಂದ್ಯ ಟೈ ಆದರೆ ಪ್ರಶಸ್ತಿ ಹಂಚಿಕೊಳ್ಳಲು ಇತ್ತಂಡಗಳಲ್ಲಿ ಸಾಕಷ್ಟು ಅರ್ಹತೆಯನ್ನು ಗಮನಿಸಿದ್ದಾರೆ.
ಈ ಸಂಬಂಧ ಇಎಸ್ ಪಿಎನ್ ಕ್ರಿಕ್ ಇನ್ಪೋ ಜತೆ ಮಾತನಾಡಿರುವ ಅವರು, '' ಏಕದಿನ ಪಂದ್ಯದಲ್ಲಿ ಸೂಪರ್ ಓವರ್ ಅನ್ನು ನಾನು ಈವರೆಗೂ ನಿರ್ಧರಿಸಿಲ್ಲ. ಏಕದಿನ ಕ್ರಿಕೆಟ್ ಪಂದ್ಯವನ್ನು ದೀರ್ಘಕಾಲ ಆಡುವ ಕಾರಣ ಪಂದ್ಯ ಒಂದು ವೇಳೆ ಟೈ ಆದರೆ ಯಾವುದೇ ಸಮಸ್ಯೆ ಇಲ್ಲ, '' ಎಂದು ಟೇಲರ್ ಹೇಳಿದ್ದಾರೆ. '' ಫುಟ್ಬಾಲ್ ಅಥವಾ ಕೆಲವು ಇತರ ಪಂದ್ಯಗಳಲ್ಲಿ ಗೆಲ್ಲುವವರೆಗೂ ಆಡುವಂತೆ ಟಿ20 ಮಾದರಿಯ ಪಂದ್ಯದಲ್ಲಿ ಫಲಿತಾಂಶ ಬರುವವರೆಗೂ ಸೂಪರ್ ಓವರ್ ಆಡಿಸಬಹುದು. ಆದರೆ ಏಕದಿನ ಮಾದರಿಯ ಪಂದ್ಯದಲ್ಲಿ ಸೂಪರ್ ಓವರ್ ಅಗತ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಬದಲಿಗೆ ನೀವು ಜಂಟಿ ವಿಜೇತರನ್ನು ಹೊಂದಬಹುದು ಎಂದು ನಾನು ಭಾವಿಸುತ್ತೇನೆ,'' ಎಂದಿದ್ದಾರೆ. ಇದೇ ವೇಳೆ ಏಕದಿನ ಮಾದರಿಯ ಸುದೀರ್ಘ ಆಟವನ್ನು ಪರಿಗಣಿಸಿದರೆ, ಟೈ ನ್ಯಾಯಯುತ ಫಲಿತಾಂಶ ಎಂದು 36 ವರ್ಷದ ಟೇಲರ್ ಅಭಿಪ್ರಾಯಪಟ್ಟಿದ್ದಾರೆ.