ಸೋಮವಾರದಿಂದ ನಿಮ್ಮನೆಗೆ ‘ಮುದ್ದುಸೊಸೆ’ ಯ ಆಗಮನ

The arrival of 'Muddusose' from Monday

ಸೊಸೆ ಮುದ್ದಾಗಿರಬೇಕು ಎಂಬ ಕನಸು, ಬಯಕೆ ಯಾರಿಗಿಲ್ಲ ಹೇಳಿ. ಈಗ ಅಂಥ ‘ಮುದ್ದು ಸೊಸೆ’ ಸೋಮವಾರದಿಂದ ನಿಮ್ಮ ಮನೆಗೆ ಆಗಮಿಸಲಿದ್ದಾಳೆ!   

ಮಗ ಇನ್ನೂ ಚಿಕ್ಕವನಿದ್ದಾನೆ, ಹೇಗೆ ಸೊಸೆ ಮನೆಗೆ ಬರಲು ಸಾಧ್ಯ? ಎಂದು ಗಾಬರಿಯಾಗಬೇಡಿ! ನಾವು ಹೇಳುತ್ತಿರುವುದು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರಲಿರುವ ಮುದ್ದು ಸೊಸೆಯ ಕಥೆ.  

ಕಲರ್ಸ್‌ ಕನ್ನಡ ವಾಹಿನಿ  ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ, ಮತ್ತೊಂದು ಹೃದಯಸ್ಪರ್ಶಿ ಕತೆ ’ಮುದ್ದು ಸೊಸೆ’ಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್ ನಾಯಕಿಯಾಗಿರುವ, ಮುನಿ ಮತ್ತು ಹರಿಣಿ ಶ್ರೀಕಾಂತ್ ತಾರಾಗಣದ ಈ ಬಹುನೀರೀಕ್ಷಿತ ಧಾರಾವಾಹಿ ಏಪ್ರಿಲ್ 14ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ  7:30ಕ್ಕೆ ನಿಮ್ಮ ಕಲರ್ಸ್‌ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.   

’ಎಸ್ಟ್ರೆಲ್ಲಾ ಸ್ಟೋರೀಸ್ ’ ನಿರ್ಮಿಸುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯು ಬೊಗಸೆಗಣ್ಣಿನ ಬಯಕೆಯ ವಿದ್ಯಾಳ ಕತೆಯನ್ನು ಹೇಳುತ್ತದೆ.  ಸಕ್ಕರೆ ನಗರ ಮಂಡ್ಯದಲ್ಲಿ ಚಿತ್ರೀಕರಿಸಲಾಗಿರುವ ಈ ಧಾರಾವಾಹಿ, ಭಾರತದ ಗ್ರಾಮೀಣ ಕುಟುಂಬಗಳ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ.  ಈ ಎಲ್ಲ ಚೌಕಟ್ಟಿನಲ್ಲಿ ಒಬ್ಬ ಮಹಿಳೆಯ ರೂಪಾಂತರವನ್ನು ಜನರಿಗೆ ಮನಮುಟ್ಟುವಂತೆ ಹೇಳುತ್ತದೆ.  ಧಾರಾವಾಹಿಯು ಪ್ರೀತಿ, ಗೌರವ ಮತ್ತು ಕುಟುಂಬ ಮೌಲ್ಯಗಳ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತ ಹೋಗುತ್ತದೆ.   

ವೈದ್ಯೆ ಆಗಬೇಕೆಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದಾರ್ಥಿನಿ ವಿದ್ಯಾ; ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ  ಕತೆಯನ್ನು ಹೇಳುತ್ತದೆ. ಉಳಿದ ಕಥೆ, ವಿವರಗಳನ್ನು ಸೋಮವಾರದಿಂದ ಕಲರ್ಸ್‌ ಕನ್ನಡದಲ್ಲಿ ತಪ್ಪದೇ ನೋಡಿ ’ಮುದ್ದು ಸೊಸೆ’.