ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ

ಬೆಂಗಳೂರು,ಏ.5,ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ವಾಹನದಲ್ಲಿ ಆಗಮಿಸಿದ್ದು ಮಾತ್ರವಲ್ಲ ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ವಿದ್ಯಾರಣ್ಯಪುರದ ವಿರೂಪಾಕ್ಷಪುರ ನಿವಾಸಿ ವೆಂಕಟೇಶ ಗೌಡ ಮತ್ತು  ಬಿ. ರಾಮಕೃಷ್ಣ ಬಂಧಿತ ಆರೋಪಿಗಳು. ಇವರು ಲಾಕ್‌ಡೌನ್ ನಿಷೇಧಾಜ್ಞೆ ಉಲ್ಲಂಘಿಸಿ ಕಾರಿನಲ್ಲಿ ತಿರುಗಾಡುತ್ತಾ  ಮುಖ್ಯಮಂತ್ರಿಗಳ ಹೆಸರಲ್ಲಿ ಪೊಲೀಸರಿಗೆ ಬೆದರಿಕೆ ಹಾಕಿದ್ದರು.ಗ್ರಾನೈಟ್ ವ್ಯಾಪಾರ ಮಾಡುತ್ತಿರುವ ಇವರು ಕೆಲವು ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.ಕಾರಿನಲ್ಲಿ ದೇವನಹಳ್ಳಿಯ ರಾಣಿ ಕ್ರಾಸ್  ಬಳಿ ಬಂದ ಇವರನ್ನು ಕರ್ತವ್ಯನಿರತ ಪೊಲೀಸರು ತಡೆದು ವಿಚಾರಿಸಿದ್ದಾರೆ. ಈ ವೇಳೆ  ಆರೋಪಿಗಳು ಮುಖ್ಯಮಂತ್ರಿಗೆ ಹೇಳಿ ನಿಮ್ಮನ್ನು ನಾಳೆಯೇ ಅಮಾನತು ಮಾಡಿಸುತ್ತೇನೆ ಎಂದು ಬೆದರಿಸಿದ್ದಾರೆ. ಅಲ್ಲದೆ, ಕರ್ತವ್ಯಕ್ಕೆ  ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಠಾಣೆ  ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.