ಚೆನ್ನೈ, ಮೇ 27,ಕೊರೊನವೈರಸ್ ವಿರುದ್ಧ ಹೋರಾಟದ ನಡುವೆಯೂ ತಮಿಳುನಾಡು ಸರ್ಕಾರ ಇಂದು 15,000 ಕೋಟಿ ರೂ ಹೂಡಿಕೆಯನ್ನು ಒಳಗೊಂಡ 17 ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಹೂಡಿಕೆಯಿಂದ 45,000 ಉದ್ಯೋಗಗಳು.ಸೃಷ್ಠಿಯಾಗುವ ನಿರೀಕ್ಷೆ ಹೊಂದಲಾಗಿದೆ.ಜರ್ಮನಿ, ಫಿನ್‌ಲ್ಯಾಂಡ್, ತೈವಾನ್, ಫ್ರಾನ್ಸ್, ದಕ್ಷಿಣ ಕೊರಿಯಾ, ಜಪಾನ್, ಚೀನಾ, ಅಮೆರಿಕ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ನೆದರ್‌ಲ್ಯಾಂಡ್ಸ್ ನ ಕಂಪೆನಿಗಳೊಂದಿಗೆ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ರಾಜ್ಯ ಸಚಿವಾಲಯದಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸಮ್ಮುಖದಲ್ಲಿ ಸರ್ಕಾರ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿತು.
ಕೊವಿಡ್-19 ಸಾಂಕ್ರಾಮಿಕ ರೋಗದಿಂದ ವಿಶ್ವ ಆರ್ಥಿಕತೆಗೆ ಹಿನ್ನಡೆಯಾಗಿರುವ ಸಮಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಕ್ರಮೇಣ ಚೇತರಿಸಿಕೊಳ್ಳುವ ಯತ್ನದ ಭಾಗವಾಗಿ ರಾಜ್ಯ ಸರ್ಕಾರ ಕೈಗಾರಿಕಾ ಅಭಿವೃದ್ಧಿಯನ್ನು ಪುನಶ್ಚೇತನಗೊಳಿಸಲು ಮತ್ತು ತಮಿಳುನಾಡು ರಾಜ್ಯವನ್ನು ಮುಂಚೂಣಿ ಕೈಗಾರಿಕಾ ತಾಣವನ್ನಾಗಿ ಮಾಡಲು ಹೂಡಿಕೆಯನ್ನು ಉತ್ತೇಜಿಸುತ್ತಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ‘ಹೂಡಿಕೆಗಳನ್ನು ಆಕರ್ಷಿಸಲು ಮುಖ್ಯ ಕಾರ್ಯದರ್ಶಿ ಕೆ ಷಣ್ಮುಗಮ್ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗಿದ್ದು, ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಆರ್‌ಬಿಐ ಮಾಜಿ ಗವರ್ನರ್ ಡಾ ಸಿ ರಂಗರಾಜನ್ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದೆ. ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಲು ಸಹಕರಿಸುತ್ತಿರುವ ಎಲ್ಲ ಭಾಗೀದಾರರಿಗೆ ಧನ್ಯವಾದಗಳು. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾತಾವರಣವಿದ್ದು, ಹೊಸ ಹೂಡಿಕೆ ಅನೇಕ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.