ಲೋಕದರ್ಶನ ವರದಿ
ನಿಪ್ಪಾಣಿ 06: ನವರಾತ್ರಿ ಉತ್ಸವವು ಸತ್ಯಕ್ಕೆ ಜಯವಾದುದರ ಸಂಕೇತವಾಗಿದ್ದು, ಅವರಿವರ ವಧೆಗಿಂತ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುವ ದುರಾಲೋಚನೆ, ದುಷ್ಟ ಗುಣಗಳನ್ನು ಸಂಹಾರ ಮಾಡಲು ಎಲ್ಲರೂ ಮುಂದಾಗಬೇಕಿದೆ ಎಂದು ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಕುಮಾರ ತಳವಾರ ಅಭಿಪ್ರಾಯಪಟ್ಟರು.
ಅವರು ಕೆಎಲ್ಇ ಸಂಸ್ಥೆಯ ಸ್ಥಳೀಯ ಅಕ್ಕೋಳ ರಸ್ತೆಯಲ್ಲಿರುವ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ನವರಾತ್ರಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಪ್ರಯತ್ನವಾದಿಗಳಿಂದ ಮಾತ್ರ ತಪ್ಪುಗಳಾಗಲು ಸಾಧ್ಯವೇ ಹೊರತು ಖಾಲಿ ಕುಳಿತವರಿಂದ ಅಲ್ಲ. ಜೀವನದಲ್ಲಿ ಮಾಡುವ ತಪ್ಪುಗಳಿಂದಲೂ ಸಹ ಕಲಿಯುವ ಅವಕಾಶಗಳು ಸಾಕಷ್ಟಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಲಕ್ಷ್ಮಣ ಮಾಳಿ ಮಾತನಾಡಿ, ಮೂರ್ತಿಯಾಗಿ ಅರಳಬೇಕಾದರೆ ಮೊದಲು ಉಳಿಯ ಏಟನ್ನು ತಿನ್ನಲು ಸಿದ್ಧರಾಗಬೇಕು. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿಯೂ ಸಹ ಕಷ್ಟ ಪಡದೇ ಯಶಸ್ಸು ಸಿಗಲಾರದು. ನಿಶ್ಚಿತವಾದ ಗುರಿಯೊಂದಿಗೆ ವಿದ್ಯಾರ್ಥಿಗಳು ಈಗಿನಿಂದಲೇ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದರು. ಪ್ರೊ. ರೇಣು ಗುಗ್ಗರೆ ಸೆಮಿಸ್ಟರ್ ಪದ್ಧತಿಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ನಂತರದಲ್ಲಿ ವಿದ್ಯಾರ್ಥಿಗಳಿಂದ ನಡೆದ ದಾಂಡಿಯಾ ಕಾರ್ಯಕ್ರಮವು ಗಮನ ಸೆಳೆಯಿತು. ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯ ನಚಿಕೇತ ಹನುಮಂತಗಡ, ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯ ಜ್ಯೋತಿ ಕಿನ್ನಿಂಗೆ, ಪ್ರೊ. ಆನಂದ ತಂವಶಿ, ಪ್ರೊ. ವ್ಯಾಲೆಂಟೈನ್ ಫರ್ನಾಂಡಿಸ್ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಮರ ತಾವದಾರೆ ಸ್ವಾಗತಿಸಿದರು. ಕಾವ್ಯಾ ಕುಲಕರ್ಣಿ ಮತ್ತು ಲಕ್ಷ್ಮಿ ಕುಂಬಾರ ಪರಿಚಯಿಸಿದರು. ಪೂಜಾ ಕುರಾಡೆ ನಿರೂಪಿಸಿದರು. ಅಂಕಿತಾ ಹಲಗೇಕರ ವಂದಿಸಿದರು.