ಚೆನ್ನೈ, ಜ ೨೪, ದ್ರಾವಿಡ ಸಿದ್ಧಾಂತವಾದಿ ಇ.ವಿ. ರಾಮಸ್ವಾಮಿ ಪೆರಿಯಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧ ಕ್ರಮ ಜರುಗಿಸಲು ಚೆನ್ನೈ ಪೊಲೀಸರಿಗೆ ತಾಕೀತು ಮಾಡುವಂತೆ 'ದ್ರಾವಿಡಾರ್ ವಿಡುದಲೈ ಕಳಗಂ’ (ಡಿವಿಕೆ) ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೋಗದೆ ನೇರವಾಗಿ ಹೈಕೋರ್ಟ್‌ಗೆ ಬರುವ ತುರ್ತಾದರೂ ಏನಿತ್ತು ? ಎಂದು ಕೋರ್ಟ್ ಆರ್ಜಿದಾರರನ್ನು ಪ್ರಶ್ನಿಸಿದೆ.ಇತ್ತೀಚಿಗೆ ಚೆನ್ನೈನಲ್ಲಿ ನಡೆದ ತಮಿಳು ಪತ್ರಿಕೆ ’ತುಘಲಕ್’ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ೧೯೭೧ ರಲ್ಲಿ ಪೆರಿಯಾರ್ ನೇತೃತ್ವದಲ್ಲಿ ಸೇಲಂನಲ್ಲಿ ನಡೆದಿದ್ದ ಮೂಢನಂಭಿಕೆ ವಿರೋಧಿ ಸಭೆಯಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತೆಯ ಬೆತ್ತಲೆ ಪ್ರತಿಕೃತಿಗಳಿಗೆ ಪಾದರಕ್ಷೆ ಹಾರ ಹಾಕಿ ಮೆರವಣಿಗೆ ನಡೆಸಲಾಗಿತ್ತು ಎಂದು ರಜನಿಕಾಂತ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಈ ಘಟನೆಯನ್ನು ಅಂದಿನ ಕಾಲದಲ್ಲೇ ತುಘಲಕ್ ಸಂಸ್ಥಾಪಕ ಸಂಪಾದಕ ದಿ. ಚೋ ರಾಮಸ್ವಾಮಿ ಕೂಡ ಖಂಡಿಸಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದರು ಎಂದು ರಜನಿ ಹೇಳಿದ್ದರು.ರಜನೀಕಾಂತ್ ಹೇಳಿಕೆಗೆ ದ್ರಾವಿಡರ್ ವಿಡುದಲೈ ಕಳಗಂ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಜನವರಿ ೧೮ ರಂದು ಟ್ರಿಪ್ಲಿಕೇನ್ ಪೊಲೀಸ್ ಠಾಣೆಯಲ್ಲಿ ರಜನಿಕಾಂತ್ ವಿರುದ್ದ ದೂರು ದಾಖಲಿಸಿತ್ತು. ದೂರು ಸ್ವೀಕಾರ ಸಂಬಂಧ ಸ್ವೀಕೃತಿ ಪತ್ರ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಚೆನ್ನೈ ಜಿಲ್ಲಾ ಕಾರ್ಯದರ್ಶಿ ಉಮಾಪತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಡಿವಿಕೆ ಪಕ್ಷ ಹೈಕೋರ್ಟ್‌ಗೆ ಮೊರೆ ಹೋಗಿತ್ತು, ರಜನಿ ಕಾಂತ್ ತಮಿಳುನಾಡಿನ ಜನರನಡುವೆ ದ್ವೇಷ ಪ್ರಚೋದಿಸಲು ಹಾಗೂ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ರಜನೀಕಾಂತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡುವಂತೆ ನ್ಯಾಯಾಲಯವನ್ನು ಕೋರಿತ್ತು.ಈ ನಡುವೆ ತಮಿಳುನಾಡಿನ ಚೆಂಗಲ್ಪಟ್ಟು ರಸ್ತೆಯ ವೃತ್ತದಲ್ಲಿದ್ದ ಪೆರಿಯಾರ್ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.