ಜಾತಿ ಮತ ಪಂಥಗಳನ್ನು ಮೀರಿ ಮಾನವೀಯತೆಯ ಬದುಕಿನ ಅರಿವು ಮೂಡಿಸುತ್ತಿದ್ದ ಆ ಮಹಾನ್ ಗುರು, ಮನುಷ್ಯ ಮನುಷ್ಯನಾಗಿರುವುದೇ ಧರ್ಮ ಅಂತ ಸಾರಿದ ಮಹಾನ್ ಸಂತನೊಬ್ಬನ ಯುಗಾಂತ್ಯವಾಗಿದೆ. ಆ ಕ್ಷಣಗಳು ಹೇಗಿದ್ದವೆಂದರೆ, ಲಕ್ಷ ಲಕ್ಷ ಜನ ಸಾಗರ ಭೋರ್ಗರೆಯುವ ಕಡಲಿನಂತೆ ಬಂದು ಅಪ್ಪಳಿಸಿದ್ದರು. ಮರಭೂಮಿ ಬಯಲು ಕಂಡಂತಹ ಅನುಭವವಾಗುತ್ತಿತ್ತು, ಲಕ್ಷಾಂತರ ಭಕ್ತರ ಅಕ್ರಂದನ ಮುಗಿಲು ಮುಟ್ಟಿತ್ತು! ಮಹಾ ಮೌನವೇ ಆವರಿಸಿದ ಕ್ಷಣಗಳು, ಅಲ್ಲಿ ಕೈ ಮುಗಿಯುವವರು, ಪುಷ್ಪ ವೃಷ್ಠಿ ಸುರಿಯುವವರು, ಗುರುವೇ ಅಂತ ರೋದಿಸುತ್ತಿದ್ದರು ಜನ. 12ನೇ ಶತಮಾನದಲ್ಲಿ ಯಾವ ರೀತಿ ಬಸವಣ್ಣನವರ ಕಾಲ ಕಳೆದು ಹೋಗಿತ್ತೋ, ಹಾಗೆ ಈ 21ನೇ ಶತಮಾನದ ಆಧುನಿಕ ಬಸವಣ್ಣನ ಕಾಲವೂ ಕೂಡ ಅಂತ್ಯವಾದಂತೆ ಭಾಸವಾಗುತ್ತಿದೆ. ಅಂದು ಯಾವ ಬುದ್ಧ ಮಹಾವೀರರ ಕಾಲ ಅಂತ್ಯವಾಗಿತ್ತೋ, ಇಂದು ಅದೇ ರೀತಿಯ ನವಬುದ್ಧನ ಕಾಲ ಕಳೆದು ಹೋಗಿದೆ!. ಅಂದು ಯಾವ ವಿವೇಕಾನಂದ ರಾಮಕೃಷ್ಣ ಪರಮಹಂಸರ ಕಾಲ ಗತಿಸಿತ್ತೋ, ಇಂದು ಅದೇ ರೀತಿಯ ಆಧುನಿಕ ವಿವೇಕಾನಂದರ ಕಾಲ ಕಳೆದು ಹೋಗಿದೆ! ಶತಮಾನದ ಸಂತ, ಯುಗಪುರುಷನೊಬ್ಬನ ಯುಗಾಂತ್ಯವಾಗಿದೆ.
’ಕರ್ಮಣ್ಣೇವಾದಿಕಾರಸ್ತೇ ಮಾ ಫಲೇಷು ಕದಾಚನ’ ಯಾವುದೇ ಫಲಾಫಲ ನೀರೀಕ್ಷೆಗಳಿಲ್ಲದೆ ನಿನ್ನ ಕೆಲಸಗಳನ್ನು ಮಾತ್ರ ನೀನು ಮಾಡು. ಎನ್ನುವ ಆ ಗೀತಾಸಾರದ ಅಂಶಗಳನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಕೃತಿರೂಪಕ್ಕೆ ತಂದಂತಹ ಏಕೈಕ ಸನ್ಯಾಸಿ, ಶ್ರೀ ಸಿದ್ದೇಶ್ವರ ಸ್ವಾಮಿಗಳು. ಹಾಗಾಗಿ ಅವರೊಬ್ಬ ನೈಜ ಸಂತ.
ಸಾಮಾನ್ಯವಾಗಿ ಸ್ವಾಮೀಜಿ ಅಂದ ತಕ್ಷಣ ನಮ್ಮ ಕಣ್ಮುಂದೆ ಬರುವುದು ಒಂದು ಮಠ, ಕಾವಿ ವಸ್ತ್ರ, ರುದ್ರಾಕ್ಷಿ ಮಾಲೆ, ಪಾದಪೂಜೆ, ಪುಷ್ಪ ಅಭಿಷೇಕದ ಆರಾಧನೆ ಇತ್ಯಾದಿ. ಆದರೆ ಸಿದ್ದೇಶ್ವರ ಶ್ರೀಗಳು ಮಾತ್ರ, ಅಖಂಡ ಸನ್ಯಾಸತ್ವವನ್ನ ಪಾಲಿಸಿದ್ದರೂ ಯಾವತ್ತೂ ಅವರು ಕಾವಿ ತೊಡಲಿಲ್ಲ! ಗದ್ದುಗೆಯನ್ನಂತೂ ಏರಲೇ ಇಲ್ಲ! ಅಧಿಕಾರ ಸಮ್ಮಾನ ಗಳಿಗೆ ಆಸೆಪಟ್ಟವರಲ್ಲ! ಸುಖ ಭೋಗಗಳಿಗೆ ಮನಸ್ಸು ನೀಡಲಿಲ್ಲ! ಜಾತಿ ರಾಜಕಾರಣದ ಹಿಂದಂತೂ ಅಪ್ಪಿ ತಪ್ಪಿಯೂ ಬೀಳಲಿಲ್ಲ! ಸರಕಾರಿ ಹರಣದಿಂದ ಮಠ ಕಟ್ಟಲಿಲ್ಲ. ಇದ್ದಂತೆ ಇರೋದೇ ನೈಜ ಬದುಕು ಎಂದು ಸಾರಿ ಹೇಳಿದ್ದರು. ಸರಳತೆಯಲ್ಲಿಯೇ ಸರ್ವವು ಸುಂದರ ಎಂಬ ಮುತ್ತಿನಂತಹ ಮಾತುಗಳಿಂದ, ಭಾವ ತುಂಬಿದ ಬರಹಗಳಿಂದ ಜನರಿಗೆ ಬೆಳಕು ತೋರಿದ್ದರು. ಶ್ರೀಗಳು ಹಣ ಬೇಡ ಅಂದಿದ್ದು ಮಾತ್ರವಲ್ಲ, ಜೇಬುಗಳು ಕೂಡಾ ಬೇಡ ಅಂದಿದ್ದು ಅವರ ಆದರ್ಶ ಬದುಕಿನ ಪಾರದರ್ಶಕತೆಗೆ ಸಾಕ್ಷಿಯಾಗಿದೆ.
ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನಗಳ ಪ್ರಭಾವ ಹೇಗಿರುತ್ತಿತ್ತೆಂದರೆ, ತಿಂಗಳುಗಳ ಕಾಲ ನಡೆದ ಆ ಪ್ರವಚನ ಕಾರ್ಯಕ್ರಮದಲ್ಲಿ ಸ್ವತಃ ನಾನೂ ಕೂಡಾ ಭಾಗವಹಿಸಿ ಕೇಳಿದ್ದೇನೆ. 2007 ರ ಸಂದರ್ಭದಲ್ಲಿ ನಮ್ಮ ಮುಧೋಳ ನಗರದ ಕಾಲೇಜು ಮೈದಾನದಲ್ಲಿ ಒಂದು ತಿಂಗಳಗಳ ಕಾಲ ಶ್ರೀಗಳ ಪ್ರವಚನ ಕಾರ್ಯಕ್ರಮ ನಡೆದಿತ್ತು. ನಿತ್ಯ ಮುಂಜಾನೆ ಸರಿಯಾಗಿ ಆರು ಗಂಟೆಗೆ ಪ್ರಾರಂಭ ಆಗುತ್ತಿತ್ತು. ಪ್ರವಚನ ಕೇಳೊದಕ್ಕೆ ತಾಲೂಕಿನ ಅನೇಕ ಗ್ರಾಮೀಣ ಭಾಗದ ಜನರು,
ನಸುಕಿನ ನಾಲ್ಕು ಗಂಟೆಯ ವೇಳೆಗೆ ಎದ್ದು ತಮ್ಮ ನಿತ್ಯದ ಕೈಂಕರ್ಯಗಳನ್ನ ಮುಗಿಸಿಕೊಂಡು, ಎತ್ತಿನಗಾಡಿ, ಟ್ರಾಕ್ಟರ್ ಹಾಗೂ ಬೈಕುಗಳ ಮೂಲಕ ಪ್ರವಚನಕ್ಕೆ ಬರುತ್ತಿದ್ದರು. ಶ್ರೀಗಳ ಪ್ರತಿಯೊಂದು ಮಾತುಗಳು ಕೂಡಾ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಶ್ರೀಗಳು ಪ್ರವಚನ ಮಾಡುತ್ತಿದ್ದಾರೆಂದರೆ ಸೂಜಿ ಬಿದ್ದರೂ ಕೇಳಿಸದಂತಹ ನಿಶಬ್ದ ಆವರಿಸತಿತ್ತು. ಈ ನಿಶಬ್ದದ ಮಧ್ಯೆ, ಶ್ರೀಗಳ ಬಾಯಿಂದ ಬರುವಂತಹ ಪ್ರತಿಯೊಂದು ಮಾತುಗಳು ನೇರವಾಗಿ ನೆರೆದಿದ್ದ ಜನರ ಹೃದಯವನ್ನು ತಾಗುತ್ತಿದ್ದವು. ಶ್ರೀಗಳ ಪ್ರವಚನವು ಸರಳಭಾಷೆ, ನಿಖರವಾದಂತ ನಿರೂಪಣೆ, ಮೇಲುನುಡಿಯಲ್ಲಿ ಶ್ರೀಗಳು ಹೇಳುತ್ತಿದ್ದ ವಿಚಾರಗಳು ಕೇಳುಗರ ಮನಸ್ಸಿಗೆ ನಾಟಿ, ಅವುಗಳನ್ನು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದವು. ಅಂತಹ ಅದ್ಭುತವಾದ ಶಕ್ತಿ ಅವರ ನುಡಿಗಳಲ್ಲಿತ್ತು. ಅವರ ಪ್ರವಚನದ ಒಂದು ಸಾರ ಯಾವಾಗಲೂ ನನ್ನ ಕಿವಿಯಲ್ಲಿ ಗುಯಿಗುಟ್ಟುತ್ತಲೇ ಇರುತ್ತದೆ. "ಹಿಂದೆ ಯಾರಾದರೂ ಕೆಟ್ಟದ್ದನ್ನು ಮಾಡಿದರೆ ಅದನ್ನು ಮರೆತು ಬಿಡು, ನೀನು ಯಾರಿಗಾದರೂ ಒಳ್ಳೆಯದನ್ನು ಮಾಡಿದ್ದರೆ ಅದನ್ನು ಕೂಡ ಮರೆತುಬಿಡು". ಇವೆರಡನ್ನೂ ಕೂಡಾ ಮರೆತರೆ ನಿನ್ನ ಜೀವನದಲ್ಲಿ ಸುಖ. ನೆನಪಿಟ್ಟುಕೊಂಡರೆ ನಿನ್ನ ಜೀವನ ಪರ್ಯಂತ ಕೋಲಾಹಲ! ಎನ್ನುವ ಸಿದ್ದೇಶ್ವರರ ಮಾತು ಎಷ್ಟೊಂದು ಅರ್ಥಗರ್ಭಿತ.
ಒಬ್ಬ ಪತ್ರಕರ್ತರೊಮ್ಮೆ ಸ್ವಾಮೀಜಿಗೆ ಭೇಟಿಯಾಗಿ ನಾನು ನಿಮ್ಮನ್ನು ಇಂಟರ್ಮ್ಯೂ ಮಾಡಬೇಕೆಂದು ಹೇಳುತ್ತಾರೆ. ಅದಕ್ಕೆ ಸ್ವಾಮೀಜಿ ನಾನು ಇಲ್ಲಿ ಹದಿನೈದು ದಿನಗಳ ಕಾಲ ಪ್ರವಚನ ಮಾಡುತ್ತೇನೆ. ನೀವು ಆ ಹದಿನೈದು ದಿನಗಳೂ ನನ್ನ ಪ್ರವಚನ ಕೇಳಿ. 16ನೇ ದಿನವೂ ನೀವು ನನಗೆ ಏನಾದರೂ ಕೇಳಬೇಕು ಅಂತ ಅನಿಸಿದರೆ ಆಗ ನಾನು ನಿಮಗೆ ಇಂಟರ್ಮ್ಯೂ ಕೊಡುತ್ತೇನೆ ಅಂತ ಹೇಳುತ್ತಾರೆ. ಆ ಪತ್ರಕರ್ತ ಸ್ವಾಮೀಜಿಯ ಮಾತಿನಂತೆ, ಹದಿನೈದು ದಿನಗಳ ಆ ಪ್ರವಚನದಲ್ಲಿ ಭಾಗಿಯಾಗುತ್ತಾರೆ. ಹದಿನಾರನೇ ದಿನಕ್ಕೆ ಸ್ವಾಮೀಜಿಗೆ ನಮಸ್ಕರಿಸಿದ ಆ ರಿಪೋರ್ಟರ್ ಹೇಳುತ್ತಾರೆ, ಇಲ್ಲ ಸ್ವಾಮೀಜಿ ಯಾವ ಪ್ರಶ್ನೆಯೂ ಕೂಡ ನನ್ನಲ್ಲಿಲ್ಲ ಅಂತ ಹೇಳುತ್ತಾರೆ! ಮಾಧ್ಯಮದವರು ಕೂಡ ಸ್ವಾಮೀಜಿಗಳ ಪ್ರವಚನದಿಂದ ಪ್ರಭಾವ ಹೊಂದಿದ್ದರು.
ಅವರಿಗೆ ಕೋಟ್ಯಾಂತರ ಭಕ್ತಗಣ ಇತ್ತು. ಆದರೆ ಎಂದಿಗೂ ಅವರು ತಮ್ಮನ್ನು ತಾವು ಶ್ರೇಷ್ಠರೆಂದು ಅಂದುಕೊಳ್ಳಲೇ ಇಲ್ಲ. ಸನಾತನ ಧರ್ಮದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ ಶ್ರೀಗಳು ಶರಣ ಸಾಹಿತ್ಯ ವಚನಗಳ ಬಗ್ಗೆಯೂ ಕೂಡ ಬಹಳಷ್ಟು ತಿಳಿದಿದ್ದರು. ಹಾಗಾಗಿ ಸಿದ್ದೇಶ್ವರ ಶ್ರೀಗಳ ಪ್ರವಚನ ಅಂದರೆ ಅಲ್ಲಿ ಲಕ್ಷಾಂತರ ಜನ ಸಾಗರವೇ ಸೇರುತ್ತಿತ್ತು. ಶ್ರೀಗಳು ಆಡುತ್ತಿದ್ದ ಪ್ರತಿಯೊಂದು ಮಾತುಗಳು ಕೂಡ ಬದುಕಿಗೆ ಹೊಸ ದಾರಿಯನ್ನು ತೋರಿಸುವಂತಿದ್ದವು. ಆಧ್ಯಾತ್ಮಿಕ ಜಗತ್ತಿನ ಚಕ್ರವರ್ತಿಯಾಗಿ ಮೆರೆದಾಡುವ ಸಾಕಷ್ಟು ಅವಕಾಶಗಳು ಇದ್ದರೂ ಕೂಡ ಶ್ರೀಗಳು ಮಾತ್ರ ಅದಕ್ಕೆ ಯಾವತ್ತಿಗೂ ಆಸೆ ಪಡಲೇ ಇಲ್ಲ. ಆದರೆ ಕೋಟ್ಯಂತರ ಭಕ್ತರ ಮನಸ್ಸುಗಳಲ್ಲಿ ಆಧ್ಯಾತ್ಮಿಕ ಚಕ್ರವರ್ತಿಯಾಗಿ ಮೆರೆದರು. ಸಿದ್ದೇಶ್ವರ ಶ್ರೀ ಗಳಿಗೂ ಮತ್ತು ಬಿಳಿ ವಸ್ತ್ರಕ್ಕೂ ಜನ್ಮಜನ್ಮದ ನಂಟಿತ್ತೇನೊ ಅಂತ ಅನಿಸುತ್ತದೆ. ತೀರಾ ಸರಳ ಉಡುಗೆಯನ್ನು ಅಭ್ಯಾಸ ಮಾಡಿಕೊಂಡಿದ್ದ ಶ್ರೀಗಳು ತಮ್ಮ ಕೊನೆಯವರೆಗೂ ಹಾಗೆಯೇ ಬದುಕಿ ಭಕ್ತರಿಗೂ ಕೂಡ ಧರ್ಮದ ಬದುಕಿನ ದಾರಿಯನ್ನು ತೋರಿಸಿಕೊಟ್ಟರು.
ಪ್ರಶಸ್ತಿ ಸಮ್ಮಾನ, ಹಣ, ಭೌತಿಕ ಸಂಪತ್ತು ಐಷಾರಾಮಿಗಳಿಂದ ದೂರ ಉಳಿದು ನಿಜ ಸನ್ಯಾಸತ್ವವನ್ನು ಬದುಕಿನ ಭಾಗವಾಗಿರಿಸಿಕೊಂಡಿದ್ದ ಸಿದ್ದೇಶ್ವರ ಶ್ರೀಗಳು, ಆಧ್ಯಾತ್ಮವನ್ನು ಬೋಧನೆ ಅಂತ ಅಲ್ಲದೆ, ಅದನ್ನು ಸರಳ ಬದುಕಿನ ಸಹಜ ಮಾರ್ಗದಂತೆ ಜನರಿಗೆ ತಿಳಿಸುತ್ತಾ ಶ್ರೀಸಾಮಾನ್ಯರಲ್ಲಿ ಆಧ್ಯಾತ್ಮದ ಜೊತೆಗೆ ಜ್ಞಾನದ ಎಣ್ಣೆ ಹಾಕಿ ಅದನ್ನು ಸದಾ ಬೆಳಗುವಂತೆ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಸ್ವಾಮೀಜಿಗಳು ರಾಜಕೀಯ ನಾಯಕರ ಹಿಂಬಾಲಕರುಗಳಾಗಿರುವುದನ್ನು ನಾವು ನೀವೆಲ್ಲರೂ ಕಂಡಿದ್ದೇವೆ. ಯಾರೋ ಒಬ್ಬ ಪುಟಗೋಸಿ ತನ್ನ ಅಧಿಕಾರ ಕಳೆದುಕೊಂಡಾಗ ಆತನಿಗೆ ಮರಳಿ ಅಧಿಕಾರ ಕೊಡಿಸಲು ಒತ್ತಾಯ ಮಾಡುವುದು, ಮತ್ಯಾವನೊ ಒಬ್ಬನಿಗೆ ಸಚಿವ ಸ್ಥಾನ ಕೊಡಿ ಅಂತ ತುಂಬಿದ ವೇದಿಕೆಯ ಮೇಲೆ ಮುಖ್ಯಮಂತ್ರಿಗಳನ್ನ ಗಧರಿಸಿ ಬೆದರಿಕೆ ಹಾಕುವುದು, ಪ್ರತಿಭಟಿಸುವುದು, ಈ ತರಹದ ಎಲ್ಲಾ ಅಂಶಗಳನ್ನು ಗಮನಿಸಿದ್ದೇವೆ. ಈ ರೀತಿಯ ಕಪಟ ಸ್ವಾರ್ಥ ಸನ್ಯಾಸಿಗಳೇ ತುಂಬಿಕೊಂಡಿದ್ದ ಈ ಕಾಲದಲ್ಲಿ, ಸಿದ್ದೇಶ್ವರ ಸ್ವಾಮೀಜಿಗಳು ಇದ್ಯಾವುದೇ ಭೌತಿಕ ವಿಲಾಸಗಳ ಕಡೆಗೆ ಚಿತ್ತವನ್ನು ಹರಿ ಬಿಟ್ಟಿರಲಿಲ್ಲ.
ಅವರು ಕಿರು ಬೆರಳ ಐಶ್ಯಾರೆಯಲ್ಲಿ ಬಯಸಿದ್ದೆಲ್ಲವನ್ನು ಅವರ ಕಾಲು ಬುಡಕ್ಕೆ ತಂದು ಸುರಿಯಬಲ್ಲ ಶ್ರೀಮಂತ ಭಕ್ತ ಸಮೂಹ ಇತ್ತು. ಬಯಸಿದರೆ ಕೋಟ್ಯಂತರ ರೂಪಾಯಿ, ಸರಕಾರಿ ಹಣ ಬಂದು ಮಠದಂಗಳದಲ್ಲಿ ಬೀಳುತ್ತಿತ್ತು. ಆದರೆ ಹಣದ ವಾಸನೆ ಎಲ್ಲಿ ಮನಸನ್ನೇ ಕಲಸಿತಗೊಳಿಸಿಬಿಟ್ಟಿತ್ತು ಅಂತ ಬರುತ್ತಿದ್ದ ಹಣವನ್ನು ಎಡಗೈಯಲ್ಲೂ ಮುಟ್ಟುತ್ತಿರಲಿಲ್ಲ. "ನಾನು ಇಲ್ಲ, ನೀನೂ ಇಲ್ಲ, ಇಲ್ಲ ಎಂಬುದು ಕೂಡ ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು ಅನ್ನುವ ಅದ್ಭುತ ಪಾರಮಾರ್ಥಿಕ ಸತ್ಯವನ್ನು ತಮ್ಮ ಬದುಕಿನ ಉದ್ದಕ್ಕೂ ಪಾಲಿಸಿದ್ದರು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಸ್ವಾರ್ಥ ರಹಿತ ಕರ್ಮ ಯೋಗವನ್ನು ಅನುಸರಿಸುತ್ತಾ ನಿಜ ಸನ್ಯಾಸತ್ವವನ್ನು ಆಚರಿಸಿಕೊಂಡು ಬಂದಿದ್ದ ಸಿದ್ದೇಶ್ವರ ಶ್ರೀಗಳು ತಮ್ಮ ಬದುಕಿನ ಮೂಲಕ ನಮಗೆಲ್ಲ ಆದರ್ಶವಾಗಿದ್ದಾರೆ.
ಇತ್ತೀಚಿಗೆ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಗಳನ್ನು ಪಡೆಯಲು ಅರ್ಜಿ ಹಾಕುವುದರೊಂದಿಗೆ ಮತ್ತು ಇನ್ಫ್ಲುಯೆನ್ಸ್ ಗಳನ್ನು ಮಾಡುವುದರ ಮುಖಾಂತರ ಅವುಗಳನ್ನು ಪಡೆದುಕೊಳ್ಳುತ್ತಿದ್ದವರ ಸಂಖ್ಯೆಯ ಪ್ರಮಾಣವೇ ಹೆಚ್ಚು. ಆದರೆ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿ ಸಮ್ಮಾನ ಗೌರವಗಳ ಪಟ್ಟಿ ಸಣ್ಣದೇನಲ್ಲ! ಭಾರತದ ಉನ್ನತ ಗೌರವ ನಾಗರಿಕ ಪದ್ಮಶ್ರೀ ಪ್ರಶಸ್ತಿ ಕೊಡೋದಕ್ಕೆ ಕೇಂದ್ರ ಸರ್ಕಾರ ತಿರ್ಮಾನಿಸಿತ್ತು ಮತ್ತು ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಕೊಡೋದಕ್ಕೆ ಮುಂದೆ ಬಂದಾಗಲೂ ಕೂಡಾ ಆ ಎಲ್ಲಾ ಗೌರವ ಪ್ರಶಸ್ತಿಗಳನ್ನು ಅತ್ಯಂತ ನಯವಾಗಿ ತಿರಸ್ಕರಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಮಠಗಳೆಲ್ಲವೂ ಕೂಡಾ ಅತ್ಯಂತ ಶ್ರೀಮಂತವಾಗಿ ಬಿಟ್ಟಿವೆ. ಅವುಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದೆ. ಹಾಗಾಗಿ ಅಲ್ಲಿನ ಸ್ವಾಮೀಜಿಗಳು ಮಠಗಳ ಆಸ್ತಿಯನ್ನು ಕೂಡಾ ಹೆಚ್ಚಿಸುತ್ತಿದ್ದಾರೆ. ಮುಖ್ಯವಾಗಿ ರಾಜಕೀಯ ನಾಯಕರ ಸಾಕಷ್ಟು ಹಣದ ವ್ಯವಹಾರಗಳು ಕೂಡ ಮಠದಲ್ಲಿಯೇ ನಡೆಯುತ್ತಿವೆ. ಹಾಗಾಗಿ ಅವು ಶ್ರೀಮಂತ ಮಠಗಳಾಗಿ ಮತ್ತು ರಾಜಕೀಯ ನಾಯಕರ ಅಡ್ಡಾಗಳಾಗಿ ಗುರುತಿಸಿಕೊಂಡಿರುವುದು ಅತ್ಯಂತ ಶೋಚನೀಯ ಸಂಗತಿ. ಆದರೆ ಸಿದ್ದೇಶ್ವರ ಸ್ವಾಮೀಜಿಗಳ ಜ್ಞಾನ ಯೋಗಾಶ್ರಮ ಈ ಎಲ್ಲಾ ಮಠಗಳಿಗಿಂತ ಭಿನ್ನ. ಒಮ್ಮೆ ಸರ್ಕಾರ ರಾಜ್ಯದ ಎಲ್ಲಾ ಮಠಗಳಿಗೂ ಅನುದಾನಗಳನ್ನು ಘೋಷಿಸಿದಂತೆ ಶ್ರೀಗಳ ಜ್ಞಾನ ಯೋಗಾಶ್ರಮಕ್ಕೂ ಕೂಡಾ ಕೋಟ್ಯಂತರ ರೂಪಾಯಿ ಅನುದಾನವನ್ನು ಕೊಡುವುದಕ್ಕೆ ಸರಕಾರ ಮುಂದಾಗಿತ್ತು. ಮುಖ್ಯಮಂತ್ರಿಗಳೇ ಖುದ್ದಾಗಿ ಬಂದು ಅನುದಾನವನ್ನು ಸ್ವೀಕರಿಸುವುದಕ್ಕೆ ಬೇಡಿಕೊಳ್ಳುತ್ತಾರೆ, ಆಗ ಅದನ್ನು ಅತ್ಯಂತ ನಯವಾಗಿ ನಿರಾಕರಿಸುತ್ತ, ’ಯಾವುದೇ ಮಠಗಳಾಗಲಿ, ಆಶ್ರಮಗಳಾಗಲಿ ಅವು ಕೇವಲ ಅಲ್ಲಿನ ಭಕ್ತರ ದಾನದ ಮೂಲಕವೇ ನಡೆಯಬೇಕೆ ಹೊರತು ಸರ್ಕಾರಗಳ ಅನುದಾನದ ಮೂಲಕ ಅಲ್ಲ ಎಂಬ ವಿಚಾರವನ್ನ ಹೇಳಿದ ಶ್ರೀಗಳು ಅನುದಾನವನ್ನು ವಾಪಸ್ ಕಳುಹಿಸಿದ್ದರು.
ಶ್ರೀಗಳು, ಸೆಪ್ಟೆಂಬರ್ 5 - 1940ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು. ಈ ಹಿರಿಯ ಮಗ ಸಿದ್ದಗೊಂಡ ಬಿರಾದಾರ್ ಮುಂದೊಂದು ದಿನ ಈ ನಾಡಿನ ಮಹಾನ್ ಸಂತರಾಗುತ್ತಾರೆ, ದೇಶ ವಿದೇಶಗಳ ಜನ ಆತನ ಮಾತುಗಳನ್ನು ಕೇಳೋದಕ್ಕೆ ಕಾತುರಗೊಳ್ಳುತ್ತಾರೆ ಎನ್ನುವ ಸಂಗತಿಯನ್ನು ಆ ದಂಪತಿಗಳು ಅರೆತಿರಲಿಲ್ಲ! ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ, ಈ ಪುಟ್ಟ ಬಾಲಕ ತಂದೆಯೊಂದಿಗೆ ವಿಜಯಪುರದ ಜಾತ್ರೆಗೆ ಬಂದಿದ್ದ. ಅಲ್ಲಿ, ಜ್ಞಾನ ಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಶಿವಯೋಗಿ ಮಹಾ ಸ್ವಾಮಿಗಳ ಪ್ರವಚನ ಕೇಳುತ್ತಾನೆ. ಅವರ ಮಾತಿನ ಪ್ರಭಾವದಿಂದ ನಂತರ ಅದೆ ಆಶ್ರಮವನ್ನು ಸೇರಿಕೊಳ್ಳುತ್ತಾನೆ. ಆ ಪುಟ್ಟ ಹುಡುಗನಿಗೆ ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮದ ಸೆಳೆತ ಶುರುವಾಗಿತ್ತು. ಆಗಲೆ ಬಾಲಕ ತನ್ನ ಗುರುವನ್ನು ಹುಡುಕಿಕೊಂಡಿದ್ದ. ಆ ಗುರು ಕೂಡ ತನ್ನ ಬಳಿ ಬಂದ ಪರಮಾದ್ಭುತ ಶಿಷ್ಯನನ್ನು ಗುರುತಿಸುವಲ್ಲಿ ತಡ ಮಾಡಲೇ ಇಲ್ಲ. ಅದು ಯಾವ ಜನ್ಮದ ಗುರು ಸಂಬಂಧ ಇತ್ತು ಗೊತ್ತಿಲ್ಲ! ಅದ್ಭುತ ಗುರು, ಪರಮಾದ್ಬುತ ಶಿಷ್ಯ ಇರ್ವವರು ಮತ್ತೆ ಒಂದು ಗೂಡಿದರು. ಸಿದ್ದಗೊಂಡಪ್ಪ, ಸಿದ್ದೇಶ್ವರರಾದರು. ತಮ್ಮ ಶಿಷ್ಯನಿಗೆ ಶಿಕ್ಷಣ ಕೊಡುವುದರ ಜೊತೆಗೆ ಆತನ ಒಳಗಿನ ಆಧ್ಯಾತ್ಮಿಕ ದೀಪದ ಬೆಳಕನ್ನು ಹೊರ ತರುವ ಪ್ರಯತ್ನದಲ್ಲಿ ಯಶಸ್ಸು ಕಾಣುತ್ತಾರೆ. ಮಲ್ಲಿಕಾರ್ಜುನ ಶ್ರೀಗಳು ಎಲ್ಲಿಯೇ ಪ್ರವಚನಕ್ಕೆ ಹೋದರೂ ಜೊತೆಯಲ್ಲಿ ಸಿದ್ದೇಶ್ವರರನ್ನು ಕರೆದುಕೊಂಡೇ ಹೋಗುತ್ತಿದ್ದರು. ಅಲ್ಲಿನ ಜನರನ್ನು ಮತ್ತು ಅವರ ಬದುಕನ್ನು ಅರ್ಥ ಮಾಡಿಕೊಳ್ಳುತ್ತಾ ಸಿದ್ದೇಶ್ವರರ ಒಳಗಿನ ಜ್ಞಾನ ಯೋಗ ಕೂಡ ಜಾಗೃತವಾಯಿತು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಮುಗಿಸಿ, ಕೋಲಾಪುರ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುತ್ತಾರೆ. ಕನ್ನಡ, ಸಂಸ್ಕೃತ, ಮರಾಠಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಾಕಷ್ಟು ಹಿಡಿತ ಸಾಧಿಸಿದ್ದರು.
ಮಲ್ಲಿಕಾರ್ಜುನ ಶಿವಯೋಗಿಗಳ ನಂತರ ಜ್ಞಾನ ಯೋಗಾಶ್ರಮದ ಸಾರಥ್ಯವನ್ನು ವಹಿಸಿಕೊಂಡ ಸಿದ್ದೇಶ್ವರ ಶ್ರೀಗಳು ತಮ್ಮ ಸರಳತೆಯಿಂದಲೇ ಅಪಾರವಾದ ಜನ ಮನ್ನಣೆಯನ್ನು ಗಳಿಸುತ್ತಾ ಹೋಗುತ್ತಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅವರ ಅನುಯಾಯಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ತಮ್ಮ ಜೀವನದ ಸುಮಾರು 50 ವರ್ಷಗಳ ಕಾಲ ಪ್ರವಚನಗಳ ಮೂಲಕ ಭಕ್ತರ ಮನಸ್ಸುಗಳಲ್ಲಿನ ಕಲ್ಮಶವನ್ನು ಹೊರ ತೆಗೆದು ಅಲ್ಲಿ ಸಜ್ಜನಿಕೆಯ ಬೆಳಕನ್ನು ತುಂಬಿದರು. ಕಬ್ಬಿಣದ ಕಡಲೆ ಯಂತಹ ಉಪನಿಷತ್ತುಗಳ ಸಾರವನ್ನು, ಬದುಕಿನ ಗಮ್ಯವನ್ನು, ವಚನಗಳನ್ನು, ಆಧ್ಯಾತ್ಮವನ್ನು ಅತ್ಯಂತ ಸರಳವಾಗಿ ಎಂತವರಿಗೂ ಅರ್ಥವಾಗುವಂತೆ ಉಣಬಡಿಸಿದರು. ಗುರು ಮಲ್ಲಿಕಾರ್ಜುನ ಶ್ರೀಗಳ ಪ್ರವಚನಗಳನ್ನು ಬರೆದಿಟ್ಟುಕೊಂಡಿದ್ದ ಸಿದ್ದೇಶ್ವರ ಶ್ರೀಗಳು ಅದನ್ನು ’ಸಿದ್ಧಾಂತ ಶಿಖಾಮಣಿ’ ಎಂಬ ಪುಸ್ತಕದಲ್ಲಿ ದಾಖಲಿಸಿದರು. ಆ ಪುಸ್ತಕ ಪ್ರಕಟವಾದಾಗ ಶ್ರೀಗಳಿಗೆ ಕೇವಲ 19 ವರ್ಷ ವಯಸ್ಸು. ಆ ಬಳಿಕ ಶ್ರೀಗಳು ಅನೇಕ ಕೃತಿಗಳನ್ನು ಹೊರ ತರುತ್ತಾರೆ. ಉಪನಿಷತ್ತು, ಭಗವದ್ಗೀತೆಯ ಮೇಲೆ ಹಾಗೂ ಶರಣ ಸಾಹಿತ್ಯಗಳ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಬರೆದರು. ಅಲ್ಲಮ ಪ್ರಭುಗಳ ’ವಚನ ನಿರ್ವಚನ’ ’ಭಗವತ್ ಚಿಂತನ’ ಎನ್ನುವ ಕೃತಿಗಳನ್ನು ರಚಿಸಿದರು. ಇಂಗ್ಲೀಷ್ ನಲ್ಲಿಯೂ ಕೂಡ ‘God world soul’ ‘Patanjali Yoga Sutra’ ‘Narada Bhakti Sutra’ ‘Shiva Sutra’ ಎಂಬ ಮುಂತಾದ ಗ್ರಂಥಗಳನ್ನು ಬರೆದರು.
ಕೊನೆಗೆ, ವಯೋಸಹಜ ಅನಾರೋಗ್ಯ ಅವರನ್ನು ಕಾಡಿತ್ತು. ತಮ್ಮ ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಆಸ್ಪತ್ರೆಗೆ ದಾಖಲಾಗೋದಕ್ಕೆ ಒಪ್ಪಲಿಲ್ಲ. ಉತ್ತಮ ಚಿಕಿತ್ಸೆ ದೊಡ್ಡ ಆಸ್ಪತ್ರೆ ಅಂತ ಬಂದ ರಾಜಕಾರಣಿಗಳಿಗೂ ಕೂಡ ಕೈಮುಗಿದು, ಪ್ರಕೃತಿಯನ್ನು ವಿರೋಧಿಸಿ ಬದುಕುವ ಇಚ್ಛೆ ನನಗಿಲ್ಲ ಅನ್ನೊ ವಿಚಾರವನ್ನು ಸ್ಪಷ್ಟಪಡಿಸಿದ್ದರು. ಸಮಾಜದ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲಿಕ್ಕೆ ಅವನೇ ಕಳುಹಿಸಿಕೊಟ್ಟಿದ್ದ ಆ ಬೆಳಕಿನ ಪುಂಜವನ್ನು, ವೈಕುಂಠ ಏಕಾದಶಿ ಸಂಜೆ ಸ್ವರ್ಗದ ಬಾಗಿಲು ತೆಗೆದ ಹೊತ್ತಿಗೆ ಅವರ ಆತ್ಮವನ್ನು ಆ ಭಗವಂತ ತನ್ನಲ್ಲಿಗೆ ಕರೆಸಿಕೊಂಡಿದ್ದ.
ಸಾಮಾನ್ಯವಾಗಿ ಇಚ್ಚಾಮರಣ ಎಂಬುದನ್ನು ನಾವು ಪುರಾಣಗಳಲ್ಲಿ ಮಾತ್ರ ಓದಿ ಕೇಳಿದ್ದೇವೆ. ಆದರೆ ಸಿದ್ದೇಶ್ವರ ಶ್ರೀಗಳು ತಮ್ಮ ಇಚ್ಚೆಯಂತೆ ದೇಹವನ್ನು ತೊರೆದರು. ದೇಹವನ್ನು ಮಣ್ಣಿಗಿಡೋದು ಬೇಡ ಅದನ್ನು ಅಗ್ನಿಗೆ ಸ್ಪರ್ಶಿಸಿ, ಚಿತಾ ಭಸ್ಮವನ್ನು ನದಿಗೆಯ ಎಸೆಯಿರಿ, ಶ್ರದ್ಧಾ ವಿಧಿ ವಿಧಾನಗಳು ಯಾವೂ ಕೂಡ ಬೇಡ, ಸ್ಮಾರಕ ನಿರ್ಮಿಸುವುದೂ ಬೇಡ, ಈ ಭೂಮಿಗೆ ನಾನು ಹೇಗೆ ಬಂದಿದ್ದೇನೊ ಹಾಗೆ ಹೋಗಬೇಕು, ನನ್ನದು ಅನ್ನೋದು ಯಾವುದೂ ಕೂಡ ಉಳಿಯಬಾರದು. ಭೌತಿಕ ಸ್ಮಾರಕಗಳಿಂದ ಯಾವ ಮನುಷ್ಯನನ್ನು ಕೂಡ ಜೀವಂತವಾಗಿ ಇಡಲು ಸಾಧ್ಯವಿಲ್ಲ ಅಂತ ಸ್ವಾಮೀಜಿ ಮುಂಚೆಯೇ ಅಂತಿಮ ಪತ್ರದಲ್ಲಿ ಬರೆದಿಟ್ಟಿದ್ದರು.
ಸಕಲ ಸರಕಾರಿ ಗೌರವಗಳೊಂದಿಗೆ ಕರ್ಮ ಯೋಗಿಗೆ ಗೌರವವನ್ನು ಸಮರ್ಿಸಲಾಗಿತ್ತು. ಶ್ರೀಗಳ ಪಾರ್ತಿವ ಶರೀರದ ಅಂತಿಮ ಮೆರವಣಿಗೆಯ ಸಂದರ್ಭದಲ್ಲಿ ನಾಡಿನಾದ್ಯಂತ ಭಕ್ತಿಯ ಉತ್ಸವವೇ ಶುರುವಾಗಿತ್ತು. ಇಡೀ ರಸ್ತೆಗಳೇ ಮುಚ್ಚಿ ಹಾಕಿದಂತೆ ಜನ ಸಮೂಹ ನಿಂತಿತ್ತು. ಮರಗಳು ಹಾಗೂ ಮನೆಗಳ ಮಹಡಿಯ ಮೇಲೆ ಜನಸಾಗರವೇ ನಿಂತಿತ್ತು. ದಾರಿ ತೋರಿದ ಗುರುವಿಗೆ ಕೈಮುಗಿಯುತ್ತಿದ್ದ ಜನರ ಆ ಮೆರವಣಿಗೆಯನ್ನ ಕಂಡ ಆ ಸೂರ್ಯನಂತಹ ಸೂರ್ಯನೂ ಕೂಡ ಕರಗಿ ಹೋಗಿದ್ದ! ಬೆಳಕು ಮರೆಯಾಗಿ ನಕ್ಷತ್ರ ಕಾಣುತ್ತಿದ್ದ ಹೊತ್ತಲ್ಲಿ, ಅತಿರೇಕದ ಆಚರಣೆಗಳಿಲ್ಲದೆ, ಶ್ರೀಗಳ ಇಚ್ಛೆಯಂತೆ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೆ ಜಾತಿ, ಮತ ಪಂಥವನ್ನು ಮೀರಿ ಸರ್ವಧರ್ಮಗಳ ಸುಮಾರು 22 ಲಕ್ಷಕ್ಕೂ ಅಧಿಕ ಭಕ್ತರು ಶ್ರೀಗಳ ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು.
ತಮ್ಮ ಜೀವನದ ಅನುದಿನವೂ ಮತ್ತು ಕೊನೆಯ ಕ್ಷಣಗಳಲ್ಲೂ ಒಳ್ಳೆಯದನ್ನೇ ಬೋಧಿಸಿ, ಒಳ್ಳೆಯದನ್ನೇ ಬಯಸಿ, ಒಳ್ಳೆಯತನವನ್ನೇ ಉಸಿರಾಗಿಸಿಕೊಂಡಿದ್ದ ಸಿದ್ದೇಶ್ವರ ಶ್ರೀಗಳು, ಕಾಲನ ಕರೆಗೆ ಓಗೊಟ್ಟು, ತಾವೇ ಹೇಳಿದಂತೆ ಸಾವನ್ನು ಎದುರಿಸಿ ಮರಣವನ್ನು ಅನುಭವಿಸಿ ಮಂದಸ್ಥಿತವಾಗಿ ಎಂದಿನಂತೆ ಪ್ರಸನ್ನತೆಯಲ್ಲಿಯೇ ಸಿದ್ದೇಶ್ವರ ಶ್ರೀಗಳ ಆತ್ಮ ಪರಮಾತ್ಮನಲ್ಲಿ ಲೀನವಾಗಿತ್ತು. ಭವಿಷ್ಯದ ದಾರಿ ತೋರಿದ ಗುರು ಬೆಂಕಿಯ ಬೆಳಕಿನಲ್ಲಿ ಕರಗಿ ಹೊದರು. "ಬದುಕು ಮುಗಿಯುತ್ತದೆ, ದೀಪ ಆರಿದಂತೆ, ಕಡಲಿನ ತೆರೆಗಳು ಅಡಗಿದಂತೆ, ಮೇಘ ಕರಗಿದಂತೆ, ಉಳಿಯುವುದು ಬರಿ ಬಯಲು, ಮಹಾಮೌನ, ಶೂನ್ಯ ಸತ್ವ!" ಗುರು ಉಂಟು ಮಾಡಿದ ಅರಿವಿನಿಂದ ಮಾತ್ರ ಆ ಗುರುವನ್ನು ನಿಮ್ಮೊಂದಿಗೆ ಇರಿಸಿಕೊಳ್ಳುವುದಕ್ಕೆ ಸಾಧ್ಯ ಅನ್ನೋ ಅಂತಿಮ ಸಂದೇಶವನ್ನು ಕೊಟ್ಟು ಭೌತಿಕವಾಗಿ ಶ್ರೀಗಳು ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಆದರ್ಶಗಳು ಸರಳತೆ ಅವರು ಹಾಕಿಕೊಟ್ಟ ನಿಸ್ವಾರ್ಥ ಮಾರ್ಗದಲ್ಲಿ ನಡೆಯೋದಕ್ಕೆ ಸಾಧ್ಯವಾದರೆ ಆ ಗುರು ಸದಾ ನಮ್ಮ ಅರವಿನಲ್ಲಿ ಶಾಶ್ವತವಾಗಿ ಇರುತ್ತಾನೆ. ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು ಹಚ್ಚಿದ ಸರಳತೆಯ ದೀಪ ಶಾಶ್ವತವಾಗಿ ನಮ್ಮೆಲ್ಲರ ಹೃದಯ ಮಂದಿರದಲ್ಲಿ ಬೆಳಗಲಿ.
- * * * -