ಬಿಳಗಿ 12: ಸತತ ಪರಿಶ್ರಮ, ಸಾಧನೆಯ ಹಂಬಲ, ಆತ್ಮವಿಶ್ವಾಸ, ಏಕಾಗ್ರತೆ, ಸವಾಲನ್ನು ಸ್ವೀಕರಿಸುವ ಮನೋಭಾವದವರು ಮಾತ್ರ ತಾವಿಟ್ಟುಕೊಂಡ ಕನಸುಗಳನ್ನು ನನಸಾಗಿಸಿಕೊಂಡು ಸಾಧಕರೆನಿಕೊಳ್ಳಲು ಸಾಧ್ಯ ಎಂದು ಹುನಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಸಿದ್ಧಲಿಂಗಪ್ಪ ಬೀಳಗಿ ಸಮೀಪದ ಕಡಿವಾಲ ಇನಾಂ ಪ್ರೌಢಶಾಲೆಯಲ್ಲಿ ಫಲಿತಾಂಶ ಸುಧಾರಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತಾಗಿ ಹಮ್ಮಿಕೊಳ್ಳಲಾಗಿದ್ದ 'ಸಾಧನೆಗೆ ಸಾವಿರ ದಾರಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಯಶಸ್ಸು, ಸಾಧನೆ, ಪ್ರಶಂಸೆ ತಾವಾಗಿಯೇ ಬರುವದಿಲ್ಲ. ಸತತ ಪರಿಶ್ರಮದ ಮೂಲಕ ನಾವು ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕು. ಗುರು ಮತ್ತು ಗುರಿ ಇಲ್ಲದವರು, ಕೀಳರಿಮೆಯಿಂದ ಕೊರಗುವವರು, ಬರೀ ಕನಸು ಕಾಣುವವರು ಎಂದಿಗೂ ಮುಂದೆ ಬರಲು ಸಾಧ್ಯವಿಲ್ಲ. ಕೊರತೆಗಳ ಮಧ್ಯೆಯೂ ಬದುಕನ್ನು ರೂಪಿಸಿಕೊಳ್ಳುವವರು, ಕನಸನ್ನು ಗುರಿಯಾಗಿಟ್ಟುಕೊಂಡವರು ಮಾತ್ರ ನಿಜವಾದ ಸಾಧಕರೆನಿಸಿಕೊಳ್ಳಬಲ್ಲರು.
ಶಾಲಾ ಪರೀಕ್ಷೆಗೂ ಜೀವನ ಪರೀಕ್ಷೆಗೂ ಸಾಕಷ್ಟು ವ್ಯತ್ಯಾಸವಿದ್ದು ಎರಡೂ ಪರೀಕ್ಷೆಯಲ್ಲಿ ಪಾಸಾಗುವವರು ಮಾತ್ರ ಸಮಾಜದಲ್ಲಿ ಗಮನಾರ್ಹ ವ್ಯಕ್ತಿಗಳಾಗಿ ರೂಪುಗೊಳ್ಳಬಲ್ಲರು ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಹಿರಿಯ ಶಿಕ್ಷಕ ಬಿ.ಆರ್.ಗೌಡರರವರು ಪ್ರಯತ್ನಶೀಲರು ಮಾತ್ರ ಏನನ್ನಾದರೂ ಸಾಧಿಸಬಲ್ಲವರಾಗಿದ್ದು ಅಧ್ಯಯನ, ಗುರುಗಳ ಮಾರ್ಗದರ್ಶನ, ಉತ್ತಮರ ಸಹವಾಸ, ಮಾಹಿತಿ ತಂತ್ರಜ್ಞಾನದ ಸದುಪಯೋಗದ ಮೂಲಕ ಉತ್ತಮ ಅಂಕಗಳಿಸುವದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು.
ಸಾಧಕರ ಜೀವನಪಥವನ್ನು ಮಾದರಿಯಾಗಿಸಿಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದರು. ಉಪನ್ಯಾಸದ ನಂತರ ಮುಕ್ತ ಸಂವಾದ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ಆನಂದ ಗೌಡರ, ಭಾಗ್ಯಲಕ್ಷ್ಮಿ ಗೌಡರ, ದುರ್ಗೆಶ ಮಾದರ ಕಾರ್ಯಕ್ರಮದ ಆಯೋಜನೆಯಿಂದಾದ ಲಾಭದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ವಿ.ಎಸ್.ಲಾಯದಗುಂದಿ ಕಾರ್ಯಕ್ರಮದ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕರಾದ ಆರ್.ಬಿ.ಬೆಣ್ಣೂರ, ಎಸ್.ಜೆ.ಇದ್ದಲಗಿ, ರೇಣುಕಾ ಚಿನ್ನಾಪುರ ಉಪಸ್ಥಿತರಿದ್ದರು.
ಉಪನ್ಯಾಸಕ ಸಿದ್ಧಲಿಂಗಪ್ಪ ಬೀಳಗಿ ಸಂಗ್ರಹಿಸಿ ಪ್ರಕಟಿಸಿದ ಪ್ರೇರಣಾತ್ಮಕ ಮಾತುಗಳ ಕರಪತ್ರ ಮತ್ತು ಅನುಭವಾಮೃತ ಕಿರು ಪುಸ್ತಕಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿತರಿಸಲಾಯಿತು. ಖಾಸಿಂಬೀ ಪಿಂಜಾರ ಸಂಗಡಿಗರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಿ.ವಾಯ್.ಕುರಿ ಸ್ವಾಗತಿಸಿ ನಿರೂಪಿಸಿದರು. ಬಿ.ಎಸ್.ಕರನಂದಿ ವಂದಿಸಿದರು.