ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟದ ಚರ್ಚೆಗೆ ವೇದಿಕೆಯಾಗಲಿದೆ ಕೈ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು,ಮೇ 19,ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಲು ನಿರ್ಧರಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಇಂದು ಈ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಲಿದೆ.ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸಂಜೆ 4.30 ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿ ರುವ ಸಿದ್ದರಾಮಯ್ಯ ಈ ಸಂದರ್ಭ ಸರ್ಕಾರದ ವಿರುದ್ಧ ಹೋರಾಟದ ಕುರಿತು ಶಾಸಕರು ಹಾಗೂ ಪಕ್ಷದ ಮುಖಂಡರ ಜತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ತಾವು ಮುಂದಿಟ್ಟ ಯಾವ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಮಹತ್ವದ ಸಲಹೆ ಸೂಚನೆಯನ್ನು ನೀಡಿದರೂ ಪರಿಗಣಿಸುತ್ತಿಲ್ಲ. ಕೊರೋನಾ ಅಟ್ಟಹಾಸ ಮುಂದುವರಿದಿದ್ದರೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಸಲಹೆ ಯನ್ನು ಸರ್ಕಾರ ಗಾಳಿಗೆ ತೂರಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರದ ಒಟ್ಟಾರೆ ನಿರ್ಣಯಗಳನ್ನು ಬರುವ ಜೂನ್ ತಿಂಗಳ ಲ್ಲಿ ಬೃಹತ್ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
 ಕಾರ್ಮಿಕ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಸೂಕ್ತವಲ್ಲ. ಇದರಿಂದ ಕಾರ್ಮಿಕರಿಗೆ ಹಾಗೂ ರೈತರಿಗೆ ಸಮಸ್ಯೆ ಆಗಲಿದೆ. ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲು ಮುಂದಾಗಿದ್ದು, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಮಾರಕವಾಗಲಿದೆ. ಇದರಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಹೊರಡಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷವು ಸರ್ಕಾರದ ಬಳಿ ಮನವಿ ಮಾಡಿತ್ತು. ಪ್ರತಿಪಕ್ಷದ ನಿಯೋಗ ಕೂಡ ತೆರಳಿ ಸಿಎಂಗೆ ಮನವಿ ಮಾಡಿ ಬಂದಿತ್ತು. ಇದಲ್ಲದೆ ಮಾರಕ ರೋಗ ಕೊರೋನಾ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಬೇಕಿರುವ ಹಿನ್ನೆಲೆ ಈ ಕುರಿತು ಚರ್ಚೆಗೆ ವಿಶೇಷ ಅಧಿವೇಶನ ಕರೆಯುವಂತೆ ಕೂಡ ಕಾಂಗ್ರೆಸ್ ಆಗ್ರಹಿಸಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತೆರಳಲು ಅವಕಾಶ ಕಲ್ಪಿಸಬೇಕು, ಉದ್ಯೋಗವಿಲ್ಲದ ಖಾಲಿ ಕುಳಿತಿರುವ ಸಾಂಪ್ರದಾಯಿಕ ವೃತ್ತಿಪರರಿಗೆ ಸಹಾಯಧನ ನೀಡಬೇಕು, ಹೊರ ರಾಜ್ಯ ಹಾಗೂ ಪ್ರದೇಶಗಳಿಗೆ ತೆರಳುವವರಿಗೆ ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನ ತರಿಸಿಕೊಳ್ಳಬೇಕು ಎಂಬಿತ್ಯಾದಿ ಆಗ್ರಹವನ್ನು ಕಾಂಗ್ರೆಸ್ ಮಾಡಿತ್ತು.
ಆದರೆ ರಾಜ್ಯ ಸರ್ಕಾರ ಇದ್ಯಾವುದಕ್ಕೂ ಬೆಲೆಕೊಡದೆ ಪ್ರತಿ ಪಕ್ಷವನ್ನು ನಗಣ್ಯವಾಗಿ ಕಂಡಿದೆ. ಇದರಿಂದ ಸರ್ಕಾರದ ವಿರುದ್ಧ ಹೋರಾಟದ ಅಸ್ತ್ರವನ್ನು ಕೈಗೆತ್ತಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಜ್ಯ ಬಿಜೆಪಿ ಸರ್ಕಾರ ಕೇಂದ್ರದ ಕೈಗೊಂಬೆಯಂತೆ ಆಡುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಹಣ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳ ಕುರಿತು ಒತ್ತಡ ತರುವ ಕಾರ್ಯವನ್ನು ಮುಖ್ಯಮಂತ್ರಿಗಳಾಗಲಿ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರಾಗಲಿ ಮಾಡುತ್ತಿಲ್ಲ. ಇದರಿಂದ ಜೂನ್ ತಿಂಗಳಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿರುವ ಕಾಂಗ್ರೆಸ್ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮೂಲಕ ಹೋರಾಟಕ್ಕೆ ಚಾಲನೆ ನೀಡಲು ತೀರ್ಮಾನಿಸಿದೆ. ಈ ನಿರ್ಧಾರದ ಕುರಿತು ಇಂದಿನ ಶಾಸಕಾಂಗ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು, ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕರು ಆಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಸತೀಶ್ ಜಾರಕಿಹೊಳಿ ಸಲೀಂ ಅಹಮದ್ ಮಾಜಿ ಡಿಸಿಎಂ ಜಿ ಪರಮೇಶ್ವರ್ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಲವು ಮಾಜಿ ಸಚಿವರು ಶಾಸಕರು ವಿಧಾನಪರಿಷತ್ ಸದಸ್ಯರು ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.