ನವದೆಹಲಿ, ಫೆಬ್ರವರಿ 11, ದೆಹಲಿ ವಿಧಾನಸಬಾ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಿಗಿಭದ್ರತೆಯಲ್ಲಿ ಪ್ರಾರಂಭವಾಗಿದೆ. 593 ಪುರುಷರು ಮತ್ತು 79 ಮಹಿಳೆಯರು.ಸೇರಿದಂತೆ ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ರಾಜಕೀಯ ಬೌಭವಿಷ್ಯ ಇಂದೇ ತೀರ್ಮಾನವಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿದ್ದ ಆಮ್ ಆದ್ಮಿ ಪಕ್ಷವು ಮತ್ತೆ ಅಧಿಕಾರ ಹಿಡಿಯುವ ಆತ್ಮ ವಿಶ್ವಾಸದಲ್ಲಿ ಬೀಗುತ್ತಿದೆ .ವಿವಿಧ ಟೆಲಿವಿಷನ್ ಚಾನೆಲ್‌ಗಳ ನಿರ್ಗಮನ ಸಮೀಕ್ಷೆಗಳು ಸಹ ಆಡಳಿತ ಎಎಪಿ ಸತತ ಮೂರನೇ ಬಾರಿಗೆ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಜ್ಜಾಗಿದೆ ಎಂದೂ ಭವಿಷ್ಯ ನುಡಿದಿವೆ.
ಸರ್ಕಾರ ರಚನೆಗೆ 70 ಸದಸ್ಯರ ವಿಧಾನಸಭೆಯಲ್ಲಿ ಮಾಜಿಕ್ ಸಂಖ್ಯೆ 36 ಅನ್ನು ಮುಟ್ಟಬೇಕಾಗಿದೆ. ಡ್ರೋನ್‌ಗಳನ್ನು ಬಳಸಿ ಅನೇಕ ಪ್ರದೇಶಗಳಲ್ಲಿ ಭದ್ರತೆಗೆ ಪೊಲಿಸರು ಮೇಲ್ವಿಚಾರಣೆಯನ್ನು ಕೈಗೊಂಡಿದ್ದಾರೆ . ದೆಹಲಿ ಪೊಲೀಸರಿಂದ ನಿರ್ದಿಷ್ಟ ಚುನಾವಣಾ ಕರ್ತವ್ಯಕ್ಕೆ ಸುಮಾರು 40,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೆ 8 ರಂದು ನಡೆದ ಚುನಾವಣೆಯಲ್ಲಿ ಒಟ್ಟುಶೇಕಡ 62.59 ರಷ್ಟು ಮತದಾನವಾಗಿತ್ತು . 2015 ರಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇಕಡಾ 67.12 ರಷ್ಟಿದ್ದು, ಎಎಪಿ 70 ಸ್ಥಾನಗಳ ಪೈಕಿ, 67 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿತ್ತು ಆದರೆ ಭಾರತೀಯ ಜನತಾ ಪಕ್ಷ ಕೇವಲ ಮೂರು ಸ್ಥಾನಗಳಿಗೆ ಸೀಮಿತವಾಗಿದ್ದರೆ, ಕಾಂಗ್ರೆಸ್ ಮೊದಲ ಬಾರಿಗೆ ಖಾತೆ ತೆರೆಯಲೂ ಸಹ ವಿಫಲವಾಗಿತ್ತು.