ದಿನಸಿ ಅಂಗಡಿಗಳು ಬೆಳಗ್ಗೆ ೯ ರಿಂದ ೧೨ಗಂಟೆಯವರೆಗೆ ಮಾತ್ರ ತೆರೆಯಬೇಕು; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಮಾ ೨೪,  ಕೋವಿಡ್- ೧೯ ಸೋಂಕು ಹಬ್ಬುವುದನ್ನು ತಡೆಗಟ್ಟುವ  ಪ್ರಯತ್ನದ  ಭಾಗವಾಗಿ  ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ದಿನಸಿ ಅಂಗಡಿಗಳು ಮತ್ತು  ಇನ್ನಿತರ ಮಳಿಗೆಗಳು  ಮಂಗಳವಾರದಿಂದ ಮಾರ್ಚ್ ೩೧ರವರೆಗೆ   ಬೆಳಗ್ಗೆ ೯ ರಿಂದ  ಅಪರಾಹ್ನ ೧೨ಗಂಟೆಯವರೆಗೆ ಮಾತ್ರ ತೆರೆಯಬೇಕು  ಎಂದು  ದಕ್ಷಿಣ ಕನ್ನಡ  ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆಟೋರಿಕ್ಷಾ ಹಾಗೂ ಟ್ಯಾಕ್ಸಿಗಳನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ  ಪ್ರಯಾಣಿಕರು ಹಾಗೂ  ಅತ್ಯಗತ್ಯ ಪದಾರ್ಥಗಳ ಸಾಗಾಣಿಕೆಗೆ ಮಾತ್ರ ಬಳಸಬೇಕು ಎಂದು ದಕ್ಷಿಣ ಕನ್ನಡ  ಜಿಲ್ಲಾಧಿಕಾರಿ ಸಿಂಧು ಬಿ. ರಾಜೇಶ್  ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಗತ್ಯ ವಸ್ತುಗಳನ್ನು ಉತ್ಪಾದನೆ, ವೈದ್ಯಕೀಯ ಸಲಕರಣೆ, ಔಷಧಿ, ಇಂಧನ,  ಕೃಷಿ ಉತ್ಪನ್ನ   ಹೊರತುಪಡಿಸಿ  ಉಳಿದ ಎಲ್ಲ  ಕೈಗಾರಿಕೆಗಳನ್ನು ಸ್ಥಗಿತಗೊಳಿಸಲು  ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದು,  ಮಂಗಳವಾರದಿಂದ ನಿಷೇಧಾಜ್ಞೆಗಳನ್ನು ಕಠಿಣವಾಗಿ ಜಾರಿಗೊಳಿಸಲಾಗುವುದು  ಎಂದು ತಿಳಿಸಿದ್ದಾರೆ.ನಿತ್ಯದ ಐದು ಬಾರಿ ಹಾಗೂ ಶುಕ್ರವಾರ ನಡೆಸುವ ವಾರದ  ಪ್ರಾರ್ಥನೆಗಳನ್ನು  ಮಾರ್ಚ್ ೩೧ರವರೆಗೆ  ಸ್ಥಗಿತಗೊಳಿಸುವಂತೆ ಜಿಲ್ಲೆಯ ಎಲ್ಲ ಮಸೀದಿಗಳಿಗೆ   ಸೂಚನೆ ನೀಡಿದ್ದಾರೆ.ಕೊರೊನಾ ವೈರಸ್  ಹಬ್ಬುವುದನ್ನು  ತಡೆಯಲು  ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ  ಈ ಸೂಚನೆಗಳನ್ನು ನೀಡಲಾಗಿದೆ. ಎಲ್ಲ ಧಾರ್ಮಿಕ ಪ್ರಾರ್ಥನೆ ಹಾಗೂ ಇನ್ನಿತರ  ಚಟುವಟಿಕೆಗಳನ್ನು ಮನೆಯೊಳಗೆ ನಡೆಸುವಂತೆ ಜನರಿಗೆ  ಮನವಿ ಮಾಡಿರುವ ಜಿಲ್ಲಾಧಿಕಾರಿ, ಯಾವುದೇ ತುರ್ತು ಪರಿಸ್ಥಿತಿ ಹೊರತುಪಡಿಸಿ ಜನರು ಹೊರಗೆ ಬರದಂತೆ ಸೂಚನೆ ನೀಡಿದ್ದಾರೆ.