ಕೊರೊನಾ ಬಿಕ್ಕಟ್ಟು : ಅಮೆರಿಕ ಆರ್ಥಿಕತೆ ಶೀಘ್ರ ಚೇತರಿಕೆ

ವಾಷಿಂಗ್ಟನ್, ಮಾರ್ಚ್ 24 ,ಕೊರೊನಾ ಸೋಂಕಿನಿಂದಾಗಿ ಹೊಡೆತ ಬಿದ್ದಿರುವ ಅಮೆರಿಕದ ಆರ್ಥಿಕತೆ ಮೂರ್ನಾಲ್ಕು ತಿಂಗಳು ಮುನ್ನವೇ ಚೇತರಿಕೆ ಕಾಣಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕ ಶೀಘ್ರವೇ ವ್ಯಾಪಾರಕ್ಕೆ ಮುಕ್ತವಾಗಲಿದೆ. ಇತರರು ಅಭಿಪ್ರಾಯಪಟ್ಟಿರುವುದಕ್ಕೂ ಮೂರು ನಾಲ್ಕು ತಿಂಗಳು ಮೊದಲೇ, ಇನ್ನಷ್ಟು ಶೀಘ್ರವೇ ಚೇತರಿಸಿಕೊಳ್ಳಲಿದೆ. ಸಮಸ್ಯೆಗಿಂತ ಪರಿಹಾರ ಹೆಚ್ಚು ಕೆಟ್ಟದಾಗಿರಬಾರದಲ್ಲವೇ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಅಮೆರಿಕದ ಆರ್ಥಿಕತೆಯ ಪುನರಾರಂಭದ ಬಗ್ಗೆ 15 ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಾಗ ಅಮೆರಿಕದ ಆರ್ಥಿಕ ಸ್ಥಿತಿ ಹೆಚ್ಚು ಉತ್ತಮವಾಗಿತ್ತು, ವೈದ್ಯಕೀಯ ಕಾರಣಗಳಿಗಾಗಿ ಬಿಕ್ಕಟ್ಟಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಶೀಘ್ರವೇ ಸಮಸ್ಯೆಗೆ ಪರಿಹಾರ ಸಿಗಲಿದೆ. ಪ್ರಯಾಣಕ್ಕೆ ಹೊಸ ನಿರ್ಬಂಧ ಹೇರುವ ಚಿಂತನೆ ಇಲ್ಲ ಎಂದೂ ಸಹ ಟ್ರಂಪ್ ಹೇಳಿದ್ದಾರೆ.ಅಮೆರಿಕದಲ್ಲಿ 43,214 ಜನರಲ್ಲಿ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡಿದ್ದು 533 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.