ಕಾಂಗ್ರೆಸ್ ಸಂಸದ ಯಾರ ಮೇಲೂ ಹಲ್ಲೆ ನಡೆಸಲಿಲ್ಲ; ರಾಹುಲ್ ಸ್ಪಷ್ಟನೆ

ನವದೆಹಲಿ, ಫೆ 7 ,ಲೋಕಸಭಾ ಸದನದ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಮೇಲೆ ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಹಲ್ಲೆ ನಡೆಸಿದ್ದಾರೆ ಎಂಬ ಕೇಂದ್ರ ಸರ್ಕಾರದ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಗೆಳೆದಿದ್ದಾರೆ. ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸದ ಟಾಗೋರ್ ಯಾರ ಮೇಲೂ ದಾಳಿ ನಡೆಸಿಲ್ಲ. ಬದಲಾಗಿ, ಅವರ ಮೇಲೆಯೇ ಹಲ್ಲೆ ನಡೆದಿದೆ ಎಂದಿದ್ದಾರೆ. 

ತಾವು ವಯನಾಡಿನಲ್ಲಿನ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತು ಪ್ರಶ್ನಿಸಿದಾಗ, ಅದನ್ನು ಉತ್ತರಿಸುವ ಬದಲು ಸಚಿವರು ಪ್ರಶ್ನೆಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿದರು. ವಯನಾಡಿನಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ ಎಂಬ ವಿಷಯವನ್ನು ತಾವು ಪ್ರಸ್ತಾಪಿಸಲು ಮುಂದಾಗಿದ್ದೆವು. ಆದರೆ, ಬಿಜೆಪಿ ತಮಗೆ ಮಾತನಾಡಲು ಎಂದಿಗೂ ಅವಕಾಶ ನೀಡುವುದಿಲ್ಲ. ಅಂತೆಯೇ ಇಂದು ಕೂಡ ಅಸಂವಿಧಾನಿಕವಾಗಿ, ಸದನದ ಹೊರಗೆ ಪ್ರಸ್ತಾಪಿಸಿದ ವಿಷಯಗಳನ್ನು ಹರ್ಷವರ್ಧನ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಉಲ್ಲೇಖಿಸಿದರು ಎಂದು ರಾಹುಲ್ ಆರೋಪಿಸಿದರು. ಮುಖ್ಯ ವಿಷಯವನ್ನು ತಿರುಚಲಾಯಿತು. ಸಂಸತ್ತಿನ ಒಳಗೆ ತಮಗೆ ಮಾತನಾಡಲು ಅವಕಾಶ ದೊರಯಲಿಲ್ಲ. ತಮ್ಮ ಧ್ವನಿಯನ್ನು ಹತ್ತಿಕ್ಕಲು ಆಡಳಿತ ಪಕ್ಷ ಯಾವಾಗಲೂ ಇದೇ ತಂತ್ರಗಾರಿಕೆ ಉಪಯೋಗಿಸುತ್ತದೆ ಎಂದರು. 

ನಂತರ ಈ ಕುರಿತು ಟ್ವೀಟ್ ಮಾಡಿರುವ ಅವರು, "ಸಂಸತ್ತಿನಲ್ಲಿ ಇಂದು ನಡೆದ ಗಲಭೆಯನ್ನು ನಾನು ಸರ್ಕಾರದ ವಿರುದ್ಧ ಪ್ರಶ್ನಿಸುವುದನ್ನು ತಡೆಯಲು ವಿನ್ಯಾಸಗೊಳಿಸಲಾಗಿತ್ತು. ಇದರಿಂದ ದೇಶದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ಬಳಿ ಯಾವುದೇ ಉಪಾಯವಿಲ್ಲ ಎಂಬುದನ್ನು ಯುವಜನರು ಸ್ಪಷ್ಟವಾಗಿ ನೋಡಬಹುದು. ಅವರನ್ನು ರಕ್ಷಿಸುವ ಸಲುವಾಗಿ ಬಿಜೆಪಿ ಸದಸ್ಯರು ಸಂಸತ್ತಿನಲ್ಲಿ ಗಲಭೆ ಉಂಟು ಮಾಡಿ ಚರ್ಚೆಯನ್ನು ತಡೆಯುತ್ತಾರೆ" ಎಂದಿದ್ದಾರೆ. ಆರೋಗ್ಯ ಸಚಿವರ  ಕಾಂಗ್ರೆಸ್ ಸಂಸದ ನಡೆಸಿದ ದಾಳಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ದೃಶ್ಯ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಮುದ್ರಿತ ದೃಶ್ಯಾವಳಿಗಳನ್ನು ಗಮನಿಸಿ. ಮಣಿಕ್ಕಮ್ ಟಾಗೋರ್ ಸದನದ ಪಡಸಾಲೆಗೆ ಹೋಗಲಿಲ್ಲ. ಯಾರ ಮೇಲೂ ಹಲ್ಲೆ ನಡೆಸಲಿಲ್ಲ. ಅವರ ಮೇಲೆ ಹಲ್ಲೆ ನಡೆಯಿತಷ್ಟೇ ಎಂದರು.