ಮೋದಿ ಸರ್ಕಾರದ 7ನೇ ಬಜೆಟ್, ಕುತೂಹಲ ಕೆರಳಿಸಿದ ಒಳಗುಟ್ಟು...!!

ನವದೆಹಲಿ ಜನವರಿ 31, ಆರ್ಥಿಕ ಕುಸಿತ, ಉದ್ಯೋಗ ಕಡಿತದ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ಸಂಕಟದ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ನಾಳೆ  ಮಂಡಿಸಲಿರುವ ಮೋದಿ ಸರ್ಕಾರದ 7ನೇ   ಕೇಂದ್ರ ಬಜೆಟ್ ಹಲವು ನಿರೀಕ್ಷೆ ಹುಟ್ಟು ಹಾಕಿದೆ, ಹೇಗೆ ಸವಾಲು ಮೆಟ್ಟಿನಿಲ್ಲಲಿದ್ದಾರೆ ಎಂಬ ಕೂತುಹಲ ಆರ್ಥಿಕ ಚಿಂತಕರಲ್ಲಿ ಮನೆ ಮಾಡಿದೆ. ರಾಷ್ಟ್ರಪತಿ ರಾಮನಾಥ್  ಕೋವಿಂದ್  ಅವರು  ಇಂದು ಸಂಸತ್ತಿನ  ಜಂಟಿ  ಸದನ ಉದ್ದೇಶಿಸಿ   ಭಾಷಣ ಮಾಡುವುದರೊಂದಿಗೆ  64 ದಿನಗಳ ಬಜೆಟ್ ಆದಿವೇಶನ ಇಂದಿನಿಂದಲೇ  ಆರಂಭವಾಗಲಿದೆ. ಜೊತೆಗೆ ಅಧಿವೇಶನ ಸಾಕಷ್ಟು ಕಾವೇರಿದ  ವಾತವರಣಕ್ಕೂ ದಾರಿಯಾಗಲಿದೆ .

ಸಿಎಎ ತಿದ್ದುಪಡಿ ಕಾಯಿದೆ ಬಹಳ ವಾಗ್ವಾದಕ್ಕೆ ಕಾರಣವಾಗುವುದು ಸತ್ಯ . ಒಟ್ಟು  45 ಮಸೂದೆಗಳು   ಮಂಡನೆಗೆ ಕಾದಿವೆ   ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೊಶಿ ಹೇಳಿದ್ದಾರೆ . ಅಧಿವೇಶನದ ಮೊದಲ ಚರಣ ಮಾ. 11ಕ್ಕೆ ಮುಗಿಯಲಿದೆ . ಇಂದೇ  ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ನಾಳಿನ  ಬಜೆಟ್ ನಲ್ಲಿ  ಆದಾಯ ತೆರಿಗೆ ವಿನಾಯಿತಿಯನ್ನು  ಪ್ರಸ್ತುತ 2. 5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಗೆ ಮಾನ್ಯತೆ ಸಿಗುವುದು  ಬಹಳ ಕಷ್ಟ ಎಂಬ  ಮಾತು ತಜ್ಞರ ವಲಯದಲ್ಲಿ  ಕೇಳಿ ಬರುತ್ತಿದೆ. ಬದಲಾಗಿ ಪಾವತಿ ತೆರಿಗೆ ಮೊತ್ತು ಹೆಚ್ಚಾಗುವ  ಸಾಧ್ಯತೆಯನ್ನು ತಳ್ಳಿಹಾಕಲಾಗದು  ಎನ್ನಲಾಗಿದೆ.   

   ದೇಶದ ಅರ್ಥವ್ಯವಸ್ಥೆ ಕಳದೆ  70 ವರ್ಷಗಳಲ್ಲಿ ಕಂಡು ಕೇಳರಿಯದ ಹಿನ್ನಡೆಯಿಂದ ಬಳಲುತ್ತಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ಹಿಂದೆಯೇ ಆತಂಕ ತೋಡಿಕೊಂಡಿದ್ದರು  ಅದೇ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಅಲ್ಪಾವಧಿಗಷ್ಟೇ ಮಂದಗತಿ ಬೆಳವಣಿಗೆ ಎಂದೂ  ನಂತರ  ಜನರನ್ನು ಸಮಾಧಾನಪಡಿಸುವ ಯತ್ನ ಮಾಡಿದ್ದರು.

2019-20ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.6.1ರಷ್ಟು ಆಗಬಹುದು ಎಂದು ಆರ್ಬಿಐ ಈ ಹಿಂದೆ ಅಂದಾಜಿಸಿತ್ತು. ಪರೋಕ್ಷ ವಲಯಲದಲ್ಲಿ 50 ಸಾವಿರ  ಕೋಟಿ ರೂಪಾಯಿ ಕೊರತೆಯಾಗಲಿದೆ  ಎಂಬ ಮಾತು ಕೇಳಿ ಬರುತ್ತಿದ್ದು ಇದನ್ನು  ಸರಿದೂಗಿಸಲು ಅವರು ಯಾವ ಸರ್ಕಸ್ ಮಾಡುತ್ತಾರೆ? ಜನರ ಮೇಲೆ  ಮತ್ತಷ್ಟು ಕರಭಾರ ಹಾಕುವರೆ?  ಎಂಬ ಪ್ರಶ್ನೆಯೂ ಕಾಡುತ್ತಿದೆ.ಸಂದಿಗ್ಧ ಪರಿಸ್ಥಿತಿಯಲ್ಲಿ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ  ಸೀತಾರಾಮನ್  ಪಾಲಿಗೆ   ನಿಜವಾಗಿಯೂ ಇದು ಸತ್ವಪರೀಕ್ಷೆಯೂ ಹೌದು, ಅಗ್ನಿ ಪರೀಕ್ಷೆಯೂ ಹೌದು.