ಅಯೋಧ್ಯೆ, ನ.18 : ಮಹಾರಾಷ್ಟ್ರದಲ್ಲಿ ಶಿವಸೇನೆಯ ಮೊದಲ ಮುಖ್ಯಮಂತ್ರಿಯಾಗಲು ಪ್ರಯತ್ನದಲ್ಲಿ ತೊಡಗಿರುವ ಪಕ್ಷದ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ನವೆಂಬರ್ 24 ರಂದು ತಮ್ಮ ಉದ್ದೇಶಿತ ಅಯೋಧ್ಯೆ ಭೇಟಿಯನ್ನು ಮುಂದೂಡುವ ಸಾಧ್ಯತೆ ಇದೆ. ಠಾಕ್ರೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ನಿರತರಾಗಿದ್ದಾರೆ, ಆದ್ದರಿಂದ ಅವರ ಉದ್ದೇಶಿತ ಅಯೋಧ್ಯೆಯ ಭೇಟಿಯನ್ನು ಮುಂದೂಡಲಾಗಿದೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನವೆಂಬರ್ 9ರಂದು ತೀಪು ನೀಡಿದ ನಂತರ, ಠಾಕ್ರೆ ಅವರು ನವೆಂಬರ್ 24 ರಂದು ರಾಮ್ ಲಲ್ಲಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಾಗಿ ಘೋಷಿಸಿದ್ದರು. ಸುಪ್ರೀಂಕೋರ್ಟ್ ತೀರ್ಪುನ ನಂತರ ಶಿವಸೇನೆ ಮುಖ್ಯಸ್ಥರು ಈ ದಿನವನ್ನು ದೇಶಕ್ಕೆ ಐತಿಹಾಸಿಕ ದಿನವೆಂದು ಬಣ್ಣಿಸಿದ್ದರು. ರಾಮ ಮಂದಿರ ಆಂದೋಲನಕ್ಕಾಗಿ ಸಮರ್ಪಣೆ ಮಾಡಿದ್ದಕ್ಕಾಗಿ ಧನ್ಯವಾದ ಹೇಳಲು ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿಯವರನ್ನು ಭೇಟಿ ಮಾಡುವುದಾಗಿಯೂ ಅವರು ಘೋಷಿಸಿದ್ದರು. ಆದರೆ, ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧವು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ವಿಷಯದಲ್ಲಿ ಹದಗೆಟ್ಟಿರುವುದರಿಂದ ಉಭಯ ಪಕ್ಷಗಳ ಮೈತ್ರಿ ಮುರಿದುಬಿದ್ದಿದೆ.