ಮೈಸೂರು, ಫೆ 10: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳು ಪುನರಾರಂಭಗೊಂಡ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಒದಗಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರ ತಿಳಿಸಿದ್ದಾರೆ,
ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದ ಸಚಿವರು, ಈ ಹಿಂದೆ ಪಠ್ಯಪುಸ್ತಕಗಳು ಸೆಪ್ಟಂಬರ್, ಆಕ್ಟೋಬರ್ ಹಾಗೂ ನವಂಬರ್ ತಿಂಗಳಲ್ಲಿ ಮಕ್ಕಳಿಗೆ ತಲುಪುತ್ತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಶಾಲೆಗಳು ಪುನರಾರಂಭವಾಗುವ ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಈ ಪ್ರಕ್ರಿಯೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರ ಅಡಳಡಿಸುವುದರ ಜೊತೆಗೆ ಸುಮಾರು 10,600 ಶಿಕ್ಷಕರನ್ನು ನೇಮಿಸಲಾಗುವುದು. ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ತಾಂತ್ರಿಕ ಕಾರಣಗಳಿಗಾಗಿ ಎರಡನೇ ಪಟ್ಟಿ ತಡೆಹಿಡಿಯಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಶಿಕ್ಷಕರು ವಿಜ್ಞಾನದ ಬಗ್ಗೆ ತೀವ್ರ ಕುತೂಹಲ ಹಾಗೂ ಆಸಕ್ತಿ ಕೆರಳಿಸುವಂತೆ ಮಾಡಿದಾಗ ಮಾತ್ರ ಅವರು ವಿಷಯಗಳ ಅಧ್ಯಯನದ ಕಡೆ ಆಕರ್ಷಿತರಾಗುತ್ತಾರೆ ಎಂದು ಸಲಹೆ ನೀಡಿದರು.