ಪುಣೆಯಲ್ಲಿ ಟೀಮ್ ಇಂಡಿಯಾಗೆ ಒಲಿಯುತ್ತಾ ಟೆಸ್ಟ್ ಸರಣಿ?

ಪುಣೆ, ಅ.10:   ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಜಯ ದಾಖಲಿಸಿರುವ ಆತಿಥೇಯ ಟೀಮ್ ಇಂಡಿಯಾ, ಗುರುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸರಣಿ ವಶಕ್ಕೆ ಪಡೆಯುವ ಕನಸು ಕಾಣುತ್ತಿದೆ.  ಸೊಗಸಾದ ಪ್ರದರ್ಶನ ನೀಡುತ್ತಿರುವ ವಿರಾಟ್ ಪಡೆ, ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಪುಣೆ ಪಿಚ್ ಸ್ಪಿನ್ ಬೌಲರ್ ಗಳಿಗೆ ಕೊಂಚ ಸಹಾಯ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಕಾಣವುದು ಕಷ್ಟ. ಸ್ಪಿನ್ ಮಾಂತ್ರಿಕ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಉತ್ತಮ ಫಾರ್ಮ್ ನಲ್ಲಿದ್ದು, ಎದುರಾಳಿಗಳನ್ನು ಕಾಡಬಲ್ಲರು.  ರೋಹಿತ್ ಮೇಲೆ ಕಣ್ಣು  ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಿಸಿಕೊಂಡಿರುವ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಸಿಡಿಸಿ ಸಾಧನೆ  ಮಾಡಿರುವ ಹಿಟ್ ಮ್ಯಾನ್ ರೋಹಿತ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.  ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಸೊಗಸಾದ ದ್ವಿಶತಕ ದಾಖಲಿಸಿರುವ ಕನ್ನಡಿಗ ಮಾಯಾಂಕ್ ಅಗರ್ ವಾಲ್ ಮೇಲೂ ಎಲ್ಲರ ದೃಷ್ಟಿ ನೆಟ್ಟಿದೆ. ಮಾಯಾಂಕ್ ಸ್ಥಿರ ಪ್ರದರ್ಶನ ನೀಡಲು ಕಾತುರರಾಗಿದ್ದಾದೆ. ಇನ್ನು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಅವಶ್ಯಕತೆ ಇದೆ.  ಇನ್ನು ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಬ್ಯಾಟಿಂಗ್ ನಲ್ಲಿ ಕಾಣಿಕೆ ನೀಡಬಲ್ಲರು. ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ರನ್ ಕಲೆ ಹಾಕಿ ಮಿಂಚಬೇಕಿದೆ.  ಟೀಮ್ ಇಂಡಿಯಾಕ್ಕೆ ಬಲ ತುಂಬವ ಸ್ಟಾರ್ ವೇಗಿಗಳು ತಮ್ಮ ಕ್ಷಮತೆಯನ್ನು ಸಾರಲು ರೆಡಿಯಾಗಿದ್ದಾರೆ. ವೇಗಿ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದು ಎದುರಾಳಿಗೆ ಕಾಟ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಸ್ಪಿನ್ ಜುಗಲ್ ಬಂದಿ ನಡೆಸಲು ರವೀಂದ್ರ ಜಡೇಜಾ ಹಾಗೂ ಅಶ್ವಿನ್ ರಣ ತಂತ್ರ ಹೆಣೆದುಕೊಂಡಿದ್ದಾರೆ.  ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಡಿದ ಎಡವಟ್ಟಿನಿಂದ ಪಾಠ ಕಲಿಯಲು ಪ್ಲಾನ್ ಮಾಡಿಕೊಂಡಿದ್ದಾರೆ. ಕ್ವಿಂಟನ್ ಡಿಕಾಕ್ ಹಾಗೂ ಡೀನ್ ಎಲ್ಗರ್ ಅವರು ಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕಬೇಕಿದೆ. ಇನ್ನಿಂಗ್ಸ್ ಆರಂಭಿಸುವ ಹೊಣೆಯನ್ನು ಈ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಹೊತ್ತುಕೊಂಡರೂ ಅಚ್ವರಿಯಿಲ್ಲ.  ವೇಗದ ಬೌಲಿಂಗ್ ನೊಗವನ್ನು ಹೊತ್ತುಕೊಳ್ಳುವ ಕಗಿಸೊ ರಬಾಡ ಅವರೊಂದಿಗೆ ಲುಂಗಿ ಗಿಡಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೇಶವ್ ಮಹಾರಾಜ್ ಹಾಗೂ ಮುತ್ತುಸ್ವಾಮಿ ವಿಕೆಟ್ ಗಳನ್ನು ಪಡೆಯಬಲ್ಲರು. ಸಂಘಟಿತ ಪ್ರದರ್ಶನ ನೀಡಿ ಎದುರಾಳಿಗೆ ಕಾಟ ನೀಡಲು ದಕ್ಷಿಣ ಆಫ್ರಿಕಾ ಪ್ಲಾನ್ ಮಾಡಿಕೊಂಡಿದೆ.  ಸ್ಥಳ: ಪುಣೆ ಸಮಯ: ಬೆಳಗ್ಗೆ 9.00ಕ್ಕೆ