ಕ್ರೈಸ್ಟ್‌ಚರ್ಚ್, ಫೆ 28 : ನ್ಯೂಜಿಲೆಂಡ್ ವಿರುದ್ಧ ನಾಳೆ ನಡೆಯುವ ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್ ನಮಗೆ ನಂ.1 ಆದ್ಯತೆ ಎಂದು ಹೇಳಿದ್ದಾರೆ.
ಇದೇ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಹಾಗೂ 2021ರಲ್ಲಿ ಭಾರತದ ಆತಿಥ್ಯದಲ್ಲಿ ಚುಟುಕು ವಿಶ್ವಕಪ್ ನಡೆಯಲಿದೆ. ಅದೇ ರೀತಿ ಮುಂದಿನ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಡ ನಡೆಯಲಿದೆ. ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ 360 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
ಈ ಬಗ್ಗೆ ಮಾತನಾಡಿ,” ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಬಗ್ಗೆ ಏನೂ ನಿರ್ಣಯಿಸುವುದಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ವೇಳಾಪಟ್ಟಿಯ ಅನುಸಾರವಾಗಿ ಆದ್ಯತೆ ನೀಡುತ್ತೇವೆ. ಟೆಸ್ಟ್ ಹಾಗೂ ಟಿ20 ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಬಗ್ಗೆ ನಾವು ಗಮನಿಸಿದ್ದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಾವು ಹೆಚ್ಚಿನ ರನ್ ಗಳಿಸಿದ್ದೇವೆ,’’ ಎಂದು ತಿಳಿಸಿದ್ದಾರೆ.
“ಒಂದೇ ಒಂದು ಪಂದ್ಯದಲ್ಲಿ ನಾವು ಸೋತಿದ್ದೇವೆ ಎಂದ ಮಾತ್ರಕ್ಕೆ ಗಾಬರಿ ಪಡುವ ಅಗತ್ಯವಿಲ್ಲ. ನಮ್ಮ ಹುಡುಗರು ನಾಳಿನ ಹೋರಾಟಕ್ಕೆ ಸಜ್ಜಾಗಿದ್ದಾರೆ. ನಿರೀಕ್ಷೆ ಏನೂ ಎಂದು ಅವರು ಮಾನಸಿಕವಾಗಿ ಸಿದ್ದರಿದ್ದಾರೆ,’’ ಎಂದು ಹೇಳಿದರು.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಾಳೆ ಕ್ರೈಸ್ಟ್‌ಚರ್ಚ್ ನಲ್ಲಿ ಜರುಗಲಿದೆ. ಪ್ರಸ್ತುತ ಎರಡು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಗಳಿಸಿದೆ.