ಮೌಂಟ್ ಮಾಂಗನೂಯಿ, 23 ಅನುಭವಿ ಬ್ಯಾಟ್ಸ್ ಮನ್ ಬಿ.ಜಿ ವ್ಯಾಟ್ಲಿಂಗ್ (ಅಜೇಯ 119) ಹಾಗೂ ಕಾಲಿನ್ ಡಿ ಗ್ರ್ಯಾಂಡ್ ಹೋಮ್ (65) ಇವರುಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮೊದಲ ಟೆಸ್ಟ್ ನಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ 41 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮೂರನೇ ದಿನ 4 ವಿಕೆಟ್ ಗೆ 144 ರನ್ ಗಳಿಂದ ಆಟ ಮುಂದುವರೆಸಿದ ನ್ಯೂಜಿಲೆಂಡ್, ಹ್ಯಾನ್ರಿ ನಿಕೋಲಸ್ (41) ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. 197 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯ ಭೀತಿ ಅನುಭವಿಸುತ್ತಿದ್ದ ನ್ಯೂಜಿಲೆಂಡ್ ತಂಡಕ್ಕೆ ವ್ಯಾಟ್ಲಿಂಗ್ ಹಾಗೂ ಗ್ರ್ಯಾಂಡ್ ಹೋಮ್ ಆಧಾರವಾದರು. ಈ ಜೋಡಿ ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಗಳ ವಿರುದ್ಧ ಪ್ರಹಾರ ನಡೆಸಿದತು. ಅಲ್ಲದೆ ವಿಕೆಟ್ ಬೀಳದಂತೆ ಕಾಯ್ದುಕೊಂಡು ರನ್ ಮಹಲ್ ಕಟ್ಟಿತು. ಈ ಜೋಡಿ ಬೇರ್ಪಡಿಸಲು ಇಂಗ್ಲೆಂಡ್ ಮಾಡಿಕೊಂಡ ಯೋಜನೆ ಕೈ ಕೊಟ್ಟಿತು. ಸುಮಾರು ಎರಡು ಅವಧಿಯ ಕಾಲ ಬ್ಯಾಟ್ ಮಾಡಿದ ವ್ಯಾಟ್ಲಿಂಗ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್ ಹೋಮ್ ತಂಡಕ್ಕೆ 119 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಗ್ರ್ಯಾಂಡ್ ಹೋಮ್ 108 ಎಸೆತಗಳಲ್ಲಿ 65 ರನ್ ಬಾರಿಸಿ ಸ್ಟೋಕ್ಸ್ ಗೆ ವಿಕೆಟ್ ಒಪ್ಪಿಸಿದರು. ವೃತ್ತಿ ಜೀವನದ 64ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವ್ಯಾಟ್ಲಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ಎಂಟನೇ ಬಾರಿ ಟೆಸ್ಟ್ ಕ್ರಿಕೆಟ್ ನಲ್ಲಿ ಮೂರಂಕಿ ಬಾರಿಸಿ ಸಂಭ್ರಮಿಸಿದರು. 298 ಎಸೆತಗಳಲ್ಲಿ 15 ಬೌಂಡರಿ ನೆರವಿನಿಂದ ವ್ಯಾಟ್ಲಿಂಗ್ 119 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಇವರಿಗೆ ಮಿಚೆಲ್ ಸ್ಯಾಂಟ್ನರ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಇಂಗ್ಲೆಂಡ್ ಪರ ಸ್ಯಾಮ್ ಕರನ್ ಹಾಗೂ ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 353 ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 6 ವಿಕೆಟ್ ಗೆ 394