ವಿಶಾಖಪಟ್ಟಣ, ಅ.4: ಆರಂಭಿಕ ಡೀನ್ ಎಲ್ಗರ್ (ಅಜೇಯ 76) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (ಅಜೇಯ 48) ಇವರುಗಳ ಸೊಗಸಾದ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪುಟಿದೇಳುವ ಸೂಚನೆ ನೀಡಿದೆ. ಮೂರನೇ ದಿನ ಶುಕ್ರವಾರ 3 ವಿಕೆಟ್ ಗೆ 39 ರನ್ ಗಳಿಂದ ಆಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ಭೋಜನ ವಿರಾಮಕ್ಕೆ 4 ವಿಕೆಟ್ ಗೆ 153 ರನ್ ಕಲೆ ಹಾಕಿದ್ದು, ಪುಟಿದೇಳುವ ಭರವಸೆಯನ್ನು ಪ್ರವಾಸಿ ತಂಡ ನೀಡಿದೆ. ಮೊದಲಾವಧಿಯಲ್ಲಿ ವಿಕೆಟ್ ಗಳನ್ನು ಪಡೆದು ಪ್ರವಾಸಿ ತಂಡವನ್ನು ಒತ್ತಡಕ್ಕೆ ನೂಕುವ ಸೂಚನೆಯನ್ನು ಹೊಂದಿದ್ದ ಭಾರತ ತಂಡಕ್ಕೆ ಹರಿಣಗಳ ಬ್ಯಾಟ್ಸ್ ಮನ್ ಗಳು ಕಾಡಿದರು. ತೆಂಬು ಬುವಾಮ ಅವರ ವಿಕೆಟ್ ಪಡೆದು ಇಶಾಂತ್ ಶರ್ಮಾ ಅಬ್ಬರಿಸಿದರು. ಇಲ್ಲಿಂದ ವಿಕೆಟ್ ಪಡೆಯುತ್ತಾ ಸಾಗುವ ವಿರಾಟ್ ಪಡೆಯ ಕನಸಿಗೆ ಎಲ್ಗರ್ ಹಾಗೂ ಡುಪ್ಲೆಸಿಸ್ ಪೆಟ್ಟು ನೀಡಿದರು. ಸ್ಪಿನ್ ಬೌಲಿಂಗ್ ಹಾಗೂ ವೇಗದ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಗಳು ತಂಡಕ್ಕೆ ಚೇತರಿಕೆ ನೀಡಿತು. 63 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಎಲ್ಗರ್ ಹಾಗೂ ಡುಪ್ಲೆಸಿಸ್ ಆಸರೆಯಾದರು. ಈ ಜೋಡಿ ಐದನೇ ವಿಕೆಟ್ ಗೆ 90 ರನ್ ಗಳ ಕಾಣಿಕೆ ನೀಡಿದರು. ಡೀನ್ ಎಲ್ಗರ್ 141 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ನೆರವಿನಿಂದ 76 ರನ್ ಕಲೆ ಹಾಕಿ ಅಜೇಯರಾಗುಳಿದಿದ್ದಾರೆ. ಇವರಿಗೆ ನಾಯಕ ಫಾಫ್ ಡುಪ್ಲೆಸಿಸ್ 48 ರನ್ ಬಾರಿಸಿ ಮತ್ತೊಂದು ತುದಿ ಕಾಯ್ದುಕೊಂಡಿದ್ದಾರೆ.