ಬೆಂಗಳೂರು, ಆ 21 ರಾಜ್ಯಕ್ಕೆ ಉಗ್ರರು ನುಸುಳಿರಬಹುದು ಎನ್ನುವ ಶಂಕೆ ಮೇರೆಗೆ ಪ್ರಮುಖ ಪ್ರವಾಸಿ ತಾಣ ನಂದಿ ಗಿರಿಧಾಮ ಮತ್ತು ಆಸುಪಾಸಿನಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳದ ಅಧಿಕಾರಿಗಳು ನಂದಿ ಬೆಟ್ಟ ಸುತ್ತಮತ್ತ ಬುಧವಾರ ತಪಾಸಣೆ ನಡೆಸಿದರು. ಈ ಬೆಳವಣಿಗೆಯಿಂದ ಪ್ರವಾಸಿಗರು ಮತ್ತು ಸ್ಥಳೀಯ ಜನ ಆತಂಕಕ್ಕೊಳಗಾದರು.
ದೇಶದ ಕೆಲವು ಭಾಗಗಳಿಗೆ ಉಗ್ರರು ನುಗ್ಗಿದ್ದಾರೆ ಎಂಬ ಗುಪ್ತದಳದ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ನಂದಿಬೆಟ್ಟ ಮತ್ತಿತರ ಕಡೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವಾಹನಗಳ ತಪಾಸಣೆಯನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಿಗಿ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೂ ಬಾಂಬ್ ಪತ್ತೆ ಮತ್ತು ಶ್ವಾನದಳದ ಅಧಿಕಾರಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು. ಇದರಿಂದ ಸಾರ್ವಜನಿಕರು ಗಲಿಬಿಲಿಗೊಳ್ಳುವಂತಾಯಿತು.
ಈ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಅವರ ಲಗ್ಗೇಜ್ ಗಳನ್ನೂ ಕೂಡ ತಪಾಸಣೆಗೆ ಒಳಪಡಿಸಲಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಬಸವರಾಜ್ ಹಾಜರಿದ್ದರು.