ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ಅಪಘಾತ; ಲಾರಿ ಪಲ್ಟಿ: 11 ಮಂದಿ ಸಾವು

Terrible accident on National Highway 63; Lorry overturns: 11 killed

ಯಲ್ಲಾಪುರ 22:  ಕುಮಟಾದಲ್ಲಿ ಸಂತೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಣ್ಣು ಹಾಗೂ ತರಕಾರಿ ಹೊತ್ತು ಲಾರಿಯಲ್ಲಿ ಬರುತ್ತಿದ್ದ  ವೇಳೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಲಾರಿ ಪಲ್ಟಿಯಾಗಿ 11 ಮಂದಿ ಸಾವನ್ನಪ್ಪಿರುವ, 18 ಮಂದಿ ಗಂಭೀರವಾಗಿ ಗಾಯಗೊಂಡಿ ದುರ್ಘಟನೆಯೊಂದು  ಬುಧವಾರ ನಡೆದಿದೆ.

ಸವಣೂರು ತಾಲೂಕಿನ 28 ವ್ಯಾಪಾರಿಗಳು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಗುಳ್ಳಾಪುರದ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಪರಿಣಾಮ 10 ಮಂದಿ ವ್ಯಾಪಾರಿಗಳು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದಾರೆ. ಅಲ್ಲದೆ, ದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಸಾವನ್ನಪ್ಪಿದವರನ್ನು ಫಯಾಜ್ ಜಮಖಂಡಿ (45), ವಾಸೀಂ ಮುಡಗೇರಿ (35), ಇಜಾಜ್ ಮುಲ್ಲಾ (20), ಸಾದೀಕ್ ಭಾಷ್ (30), ಗುಲಾಮ್ ಹುಸೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24), ಜಲಾಲ್ ತಾರಾ (30) ಎಂದು ಗುರ್ತಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ ರೂ.3 ಲಕ್ಷ ಪರಿಹಾರ ನೀಡಲಾಗುವುದು. ಜೊತೆಗೆ ಅಪಘಾತದಲ್ಲಿ ಗಾಯಗೊಂಡವರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಮನವಿ ಮಾಡುತ್ತೇನೆಂದು ತಿಳಿಸಿದ್ದಾರೆ.