ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಇರಾಕ್ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ನವದೆಹಲಿ, ಜ.8 ಇರಾಕ್ನಲ್ಲಿ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ದೇಶಕ್ಕೆ ಅನಗತ್ಯ ಪ್ರಯಾಣ ಬೆಳೆಸದಂತೆ ಭಾರತ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.ವಿದೇಶಾಂಗ ಸಚಿವಾಲಯ ಬುಧವಾರ ಈ ಸಂಬಂಧ ಭಾರತೀಯರಿಗೆ ಪ್ರಯಾಣ ಸಲಹೆಯನ್ನು ನೀಡಿದೆ. ಇರಾನಿನ ಜನರಲ್ ಖಾಸಿಮ್ ಸುಲೈಮಾನಿ ಅವರನ್ನು ಅಮೆರಿಕ ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಿದ ನಂತರ, ಇರಾಕ್ನಲ್ಲಿರುವ ಅಮೆರಿಕ ವಾಯುನೆಲೆಯ ಮೇಲೆ ಬುಧವಾರ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.ಇರಾಕ್ನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಅಧಿಸೂಚನೆಯ ತನಕ ಇರಾಕ್ಗೆ ಅನಿವಾರ್ಯವಲ್ಲದ ಎಲ್ಲಾ ಪ್ರಯಾಣವನ್ನು ಕೈಬಿಡಬೇಕು ಎಂದು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಇರಾಕ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರ ವಹಿಸಲು ಸೂಚಿಸಲಾಗಿದೆ, ಇರಾಕ್ನೊಳಗಿನ ಪ್ರಯಾಣವನ್ನು ಕೈಬಿಡಬೇಕು. ಇರಾಕ್ನಲ್ಲಿ ನೆಲೆಸಿರುವ ಭಾರತೀಯರಿಗೆ ಎಲ್ಲಾ ಸೇವೆಗಳನ್ನು ಒದಗಿಸಲು ಬಾಗ್ದಾದ್ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಎರ್ಬ್ಲ್ನ ಕಾನ್ಸುಲೇಟ್ ಕಚೇರಿ ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಎಂದು ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಸೂಚನೆಯಲ್ಲಿ ತಿಳಿಸಿದೆ.