ನವದೆಹಲಿ, ಫೆ.3 : ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಚಾಂಪಿಯನ್ ವಿಜೇತರಾದ ಸರ್ಬಿಯಾದ ನೊವಾಕ್ ಜೊಕೊವಿಚ್ ಸೋಮವಾರ ಎಟಿಪಿ ಶ್ರೇಯಾಂಕದಲ್ಲಿ ಸ್ಪೇನ್‌ನ ರಫೇಲ್ ನಡಾಲ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನ ತಲುಪಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಸೋಲಿಸಿ ಜೊಕೊವಿಚ್ ಎಂಟನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಕಳೆದ ವರ್ಷದ ಕೊನೆಯಲ್ಲಿ ಜೊಕೊವಿಚ್ ಅವರನ್ನು ಹಿಂದಿಕ್ಕಿ ನಡಾಲ್ ಅಗ್ರ ಸ್ಥಾನ ಪಡೆದಿದ್ದರು.
17 ಗ್ರ್ಯಾನ್ ಸ್ಲ್ಯಾಮ್‌ಗಳ ವಿಜೇತ 32 ವರ್ಷದ ಜೊಕೊವಿಚ್ 9720 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಡಾಲ್ 9395 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 20 ಗ್ರ್ಯಾನ್ ಸ್ಲ್ಯಾಮ್‌ಗಳ ವಿಜೇತ, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ 7130 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ಜೊಕೊವಿಚ್ ವಿರುದ್ಧ ಸೋತ ಥೀಮ್, ಒಂದು ಸ್ಥಾನಕ್ಕೆ ಜಿಗಿದು 7045 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ತಲುಪಿದರು. ರಷ್ಯಾದ ಡೆನಿಲ್ ಮೆಡ್ವೆಡೆವ್ 5960 ಅಂಕಗಳೊಂದಿಗೆ ಒಂದು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ತಲುಪಿದ್ದಾರೆ.
4745 ಅಂಕಗಳೊಂದಿಗೆ ಸ್ಟೀಫನೋಸ್ ಸಿತಿಪಾಸ್ ಆರನೇ ಸ್ಥಾನದಲ್ಲಿದ್ದರೆ, ಅಲೆಕ್ಸಾಂಡರ್ ಜ್ವೆರೆವ್ 3885 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ ಮತ್ತು ಮ್ಯಾಟಿಯೊ ಬೆರೆಟಿನಿ 2905 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಫ್ರಾನ್ಸ್‌ನ ಗೇಲ್ ಮೊನ್‌ಫಿಲ್ಸ್ 2700 ಅಂಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ಏರಿದರೆ, ಬೆಲ್ಜಿಯಂನ ಡೇವಿಡ್ ಗೋಫಿನ್ 2555 ಅಂಕಗಳೊಂದಿಗೆ 10 ನೇ ಸ್ಥಾನಕ್ಕೆ ಏರಿದ್ದಾರೆ.