ತಾಳೂರು ಮಾರ್ಗದಲ್ಲಿ ಬಸ್ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ

ತಾಳೂರು ಮಾರ್ಗದಲ್ಲಿ ಬಸ್ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ Temporary restriction on bus movement on the Talur route

 ಬಳ್ಳಾರಿ 17 :  ತಾಳೂರು ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಆದೇಶ ಹೊರಡಿಸಿದ್ದಾರೆ.  

ಕಾಮಗಾರಿಯ ವಿವರ  

ಲೋಕೋಪಯೋಗಿ ಇಲಾಖೆಯ ಕೆಎಂಆರ್ಸಿ ಯೋಜನೆಯಡಿ ರಾಜ್ಯ ಹೆದ್ದಾರಿ-61 ಮತ್ತು ರಾಜ್ಯ ಹೆದ್ದಾರಿ-128 ಸಂಪರ್ಕಿಸುವ ಸೇರುವ ದೇವದುರ್ಗ-ಅಮರಾಪುರ-ಭೋಗಾವತಿ-ಹಿರೇಕೋಟ್ನೇಕಲ್‌-ತಾಳೂರು-ಬಳ್ಳಾರಿ-ರೂಪನಗುಡಿ-ಚೆಳ್ಳಗುರ್ಕಿ  ರಸ್ತೆಯ ಚತುಷ್ಪಥ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.  ಈ ಯೋಜನೆಯ ಭಾಗವಾಗಿ ಕೊರ್ರಗುಂದಿ-ಹಂದ್ಯಳ   ಗ್ರಾಮಗಳ ಮಧ್ಯೆ ಎಲ್‌.ಎಲ್‌.ಸಿ. ಕಾಲುವೆಗೆ ಅಡ್ಡವಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಕಾಮಗಾರಿಗೆ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ವರದಿ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಮೋಟಾರು ವಾಹನ ಕಾಯ್ದೆ-1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು-1989ರ ನಿಯಮ 221(ಎ)(5)ರ ಅನ್ವಯ ಈ ಆದೇಶ ಹೊರಡಿಸಲಾಗಿದೆ.