ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್‌ಗೆ ಅಧಿಕೃತ ಟಿಟಿಡಿ ವೆಬ್‌ಸೈಟ್‌ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ

ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್‌ಗೆ ಅಧಿಕೃತ ಟಿಟಿಡಿ ವೆಬ್‌ಸೈಟ್‌ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ TTD Urges Devotees to Use Only Official Website for Srivari Darshan, Accommodation and Seva Bookings

ತಿರುಮಲ, ಜುಲೈ 15 : ಶ್ರೀವಾರಿ ದರ್ಶನ, ವಸತಿ, ಅರ್ಜಿತ ಸೇವೆಗಳು ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಎಲ್ಲ ಸೇವೆಗಳ ಬುಕ್ಕಿಂಗ್‌ಗಾಗಿ ಭಕ್ತರು ಅಧಿಕೃತ ಟಿಟಿಡಿ ವೆಬ್‌ಸೈಟ್‌ನ್ನೇ ಬಳಸಬೇಕು ಹಾಗೂ ಮಧ್ಯವರ್ತಿಗಳು ಮತ್ತು ಅನಧಿಕೃತ ವೆಬ್‌ಸೈಟ್‌ಗಳಿಂದ ದೂರವಿರಬೇಕು ಎಂದು ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ (ಎಇಒ) ಚಿ. ವೆಂಕಯ್ಯ ಚೌಧರಿ ಬುಧವಾರ ಮನವಿ ಮಾಡಿದರು.

ನಕಲಿ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಮಾಹಿತಿಗಳು ಹಾಗೂ ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡುವ ಏಜೆಂಟ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಭಕ್ತರಿಗೆ ಸಲಹೆ ನೀಡಿದರು. ಯಾವುದೇ ಬುಕ್ಕಿಂಗ್ ಮಾಡುವ ಮೊದಲು ಮಾಹಿತಿಯನ್ನು ದೃಢೀಕರಿಸಿ, ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಕೋರಿದರು.

ಅಧಿಕೃತ ಟಿಟಿಡಿ ವೆಬ್‌ಸೈಟ್‌ನಲ್ಲಿ ಶ್ರೀವಾರಿ ದರ್ಶನ, ವಸತಿ, ಅರ್ಜಿತ ಸೇವೆಗಳ ಬುಕ್ಕಿಂಗ್, ಟಿಕೆಟ್ ಬಿಡುಗಡೆ, ರದ್ದಾದ ಟಿಕೆಟ್‌ಗಳ ಲಭ್ಯತೆ, ವಿವಿಧ ದರ್ಶನ ವಿಭಾಗಗಳು ಹಾಗೂ ಪ್ರಸ್ತುತ ಕಾಯುವ ಅವಧಿಗೆ ಸಂಬಂಧಿಸಿದ ಮಾಹಿತಿಯನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಅಲ್ಲದೆ, ಅಧಿಕೃತ ಮಾಹಿತಿಯನ್ನು ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿ (ಎಸ್‌ವಿಬಿಸಿ) ಮುಖಾಂತರವೂ ಪ್ರಸಾರ ಮಾಡಲಾಗುತ್ತಿದೆ ಎಂದರು.

ಟಿಕೆಟ್ ಬುಕ್ಕಿಂಗ್ ಹಾಗೂ ಇತರ ಸೇವೆಗಳ ಕುರಿತು ಯಾವುದೇ ಮಾಹಿತಿ ಬೇಕಾದರೆ ಭಕ್ತರು ಟಿಟಿಡಿ ಕಾಲ್ ಸೆಂಟರ್‌ನ 155257 ಸಂಖ್ಯೆಯನ್ನು ಸಂಪರ್ಕಿಸಿ ಅಧಿಕೃತ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಅಥವಾ ಅನಧಿಕೃತ ವ್ಯಕ್ತಿಗಳಿಗೆ ಹಣ ವರ್ಗಾಯಿಸಬಾರದು ಹಾಗೂ ಬುಕ್ಕಿಂಗ್ ಮಾಡಿಕೊಡುವುದಾಗಿ ನೀಡುವ ಅವರ ಭರವಸೆಗಳನ್ನು ನಂಬಬಾರದು ಎಂದು ಚೌಧರಿ ಭಕ್ತರಿಗೆ ಸೂಚಿಸಿದರು.

ಮಧ್ಯವರ್ತಿಗಳು, ಏಜೆಂಟ್‌ಗಳು ಅಥವಾ ಅನಧಿಕೃತವಾಗಿ ಬುಕ್ಕಿಂಗ್ ಸೇವೆಗಳನ್ನು ನೀಡುತ್ತಿರುವವರ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಟಿಟಿಡಿ ಜಾಗೃತಿ (ವಿಜಿಲೆನ್ಸ್) ದೂರು ವಿಭಾಗದ 9866898630 ಸಂಖ್ಯೆಗೆ ದೂರು ನೀಡುವಂತೆ ಅವರು ಮನವಿ ಮಾಡಿದರು.

ವಂಚನೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಭಕ್ತರಿಗೆ ಪಾರದರ್ಶಕ ಹಾಗೂ ಸುರಕ್ಷಿತ ಸೇವೆಗಳನ್ನು ಒದಗಿಸುವುದು ಟಿಟಿಡಿಯ ಬದ್ಧತೆಯಾಗಿದ್ದು, ಎಲ್ಲ ಟಿಟಿಡಿ ಸೇವೆಗಳನ್ನು ಅಧಿಕೃತ ಮಾರ್ಗಗಳ ಮೂಲಕವೇ ಪಡೆಯುವಂತೆ ಮತ್ತೊಮ್ಮೆ ಮನವಿ ಮಾಡಿದರು.