ಬೂದಿಹಾಳ- ಪೀರಾಪೂರ ಯೋಜನೆ ಪೂರ್ಣಗೊಳಿಸಲು ಆಗ್ರಹ

ಬೂದಿಹಾಳ- ಪೀರಾಪೂರ ಯೋಜನೆ ಪೂರ್ಣಗೊಳಿಸಲು ಆಗ್ರಹ Demand to complete the Budihal-Peerapur project

 ತಾಳಿಕೋಟೆ 17: ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಅದನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಹಣಮಂತರಾಯಾ (ಮುತ್ತುಗೌಡ) ಪರಸನಹಳ್ಳಿ ಆಗ್ರಹಿಸಿದ್ದಾರೆ.  ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಈ ಭಾಗದ ರೈತರ ಮಹತ್ವಕಾಂಕ್ಷೆ ಯೋಜನೆಯಾಗಿದ್ದು ಸುಮಾರು 935 ಕೋಟಿ ವೆಚ್ಚದ ಯೋಜನೆಯಾಗಿದೆ, ಆದರೆ ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆ ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳ ನಿರ್ಲಕ್ಷೆಯಿಂದಾಗಿ ಪೂರ್ಣಗೊಳ್ಳುವಲ್ಲಿ ಸಾಕಷ್ಟು ವಿಳಂಬ ಆಗುತ್ತಿದೆ.

ಇದರಿಂದ ತಾಳಿಕೋಟೆ ಹಾಗೂ ಸುರಪುರ ತಾಲೂಕಿನ ಸುಮಾರು 54 ಹಳ್ಳಿಗಳ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ಸರ್ಕಾರ ರೈತರ ಸಹನೆಯನ್ನು ಪರೀಕ್ಷಿಸಬಾರದು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಈ ಮೊದಲು ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಯೋಜನೆಯ ಅಂತಿಮ ಹಂತದ ಎಫ್ ಐ ಸಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಎಫ್ ಐ ಸಿ ಕಾಮಗಾರಿ ಪೈಪ್ ಲೈನ್ ಮೂಲಕ ಮಾಡಬಾರದು ಅದನ್ನು ತೆರೆದ ಕಾಲುವೆ ರೂಪದಲ್ಲಿ ನಿರ್ಮಾಣ ಮಾಡಬೇಕು ಇದರಿಂದ ನೀರು ಎಲ್ಲಾ ಹೊಲಗಳಿಗೆ ಸರಳವಾಗಿ ಹರಿಯಲಿದೆ. ಸದರಿ ಯೋಜನೆ ಅಂತಿಮ ಕಾಮಗಾರಿ ಆದಷ್ಟು ಬೇಗ ಆರಂಭಿಸಲು ಕ್ರಮ ವಹಿಸಬೇಕು. ಇಲ್ಲದೆ ಹೋದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಎಂದರು.